ಮಡಿಕೇರಿ, ಜ. 7: ಭಾಗಮಂಡಲ ಗೌಡ ಸಮಾಜದಲ್ಲಿ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡಗು ಗೌಡ ಮಹಿಳಾ ಒಕ್ಕೂಟ ನಡೆಸಲು ತೀರ್ಮಾನಿಸಿರುವ ಸಮಾವೇಶದ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.
ಏಪ್ರಿಲ್‍ನಲ್ಲಿ ನಡೆಯಲಿರುವ ಸಮಾವೇಶದ ಭಾಗವಾದ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ, ಮಹಿಳೆಯರ ಭಾಗವಹಿಸುವಿಕೆ ಬಗ್ಗೆ ಭಾಗಮಂಡಲ ವ್ಯಾಪ್ತಿಯ ನಾಲ್ಕು ಗ್ರಾಮಗಳ ಮಹಿಳೆಯರ ಹಾಗೂ ಗೌಡ ಸಮಾಜದ ಸಹಭಾಗಿತ್ವ, ಸಹಕಾರವನ್ನು ಕೋರುವ ಸಲುವಾಗಿ ಸಭೆ ಏರ್ಪಡಿಸಲಾಗಿತ್ತು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಗೌರವಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ, ಸದಸ್ಯರಾದ ಬೈತಡ್ಕ ಜಾನಕಿ, ಕುಂಚಡ್ಕ ಕಸ್ತೂರಿ, ಕುದುಪಜೆ ರೇಖಾ, ಅಮೆ ದಮಯಂತಿ ಹಾಜರಿದ್ದು ಸಮ್ಮೇಳನ ನಡೆಸುವ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷ ಪಳಂಗಪ್ಪ ಅವರು ಸಮ್ಮೇಳನಕ್ಕೆ ಹಾಜರಾಗಲು ವಾಹನ ವ್ಯವಸ್ಥೆ ಸೇರಿದಂತೆ ಅಗತ್ಯವಾದ ಎಲ್ಲಾ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ನಿಡ್ಯಮಲೆ ದಾಮೋದರ, ಕಾರ್ಯದರ್ಶಿ ನಿಡ್ಯಮಲೆ ರವಿಕುಮಾರ್ ಅಧ್ಯಕ್ಷರ ಮಾತಿಗೆ ದನಿಗೂಡಿಸಿದರು. ಹಾಜರಿದ್ದ ತಣ್ಣಿಮಾನಿ, ತಾವೂರು, ಚೇರಂಗಾಲ, ಕೋರಂಗಾಲ ಗ್ರಾಮಗಳ ಮಹಿಳೆಯರು ಸಭೆಯ ಆಶೋತ್ತರ ಈಡೇರಿಸುವುದಾಗಿ ಒಪ್ಪಿಕೊಂಡರು.
ಸಿರಕಜೆ ನಾಗೇಶ್ ಹಾಗೂ ಮಗ ಪ್ರಶಾಂತ್ ಅವರು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದರು. ಕೋಳಿಬೈಲು ಮಾಲತಿ ಸ್ವಾಗತಿಸಿ, ನಿರೂಪಿಸಿದರು.