ವೀರಾಜಪೇಟೆ, ಜ.7 : ವೀರಾಜಪೇಟೆಯಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ಸಿನ ಹಿಂದಿನ ಚಕ್ರ ಹರಿದು ಕೂಲಿ ಕಾರ್ಮಿಕ ರವಿ(35) ಎಂಬಾತ ದುರ್ಮರಣಗೊಂಡಿದ್ದಾನೆ.
ವೀರಾಜಪೇಟೆಯಿಂದ ಬೆಳಿಗ್ಗೆ 6-15ಗಂಟೆಗೆ ಮಡಿಕೇರಿ ಮಾರ್ಗವಾಗಿ ತಲಕಾವೇರಿ ಕ್ಷೇತ್ರಕ್ಕೆ ಹೋಗುವ ಖಾಸಗಿ ಬಸ್ ಎಂದಿನಂತೆ ಇಲ್ಲಿನ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದ ಮುಂದಿನ ರಸ್ತೆಯ ಹೊಟೇಲ್ ಮುಂಭಾಗದಲ್ಲಿ ಚಾಲಕ ಟೀ ಕುಡಿಯಲೆಂದು ಬಸ್ಸನ್ನು ನಿಲ್ಲಿಸುತ್ತಿದ್ದಾಗ ಪಾದಚಾರಿ ರವಿ ಬಸ್ನ ಬಲ ಭಾಗಕ್ಕೆ ಬಂದು ಹಿಂದಿನ ಚಕ್ರದಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಎದೆಯ ಭಾಗದ ಮೇಲೆ ಭಾಗಶಃ ಚಕ್ರ ಹರಿದು ಚಿಂತಾಜನಕ ಸ್ಥಿತಿಯಲ್ಲಿದ್ದವನನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸುವ ಮಾರ್ಗದಲ್ಲಿ ಆತ ಸಾವನ್ನಪ್ಪಿದ್ದಾನೆ. ಅಲ್ಲಿನ ಆಜುಬಾಜಿನ ವೀಕ್ಷಕರ ಪ್ರಕಾರ ಈ ಖಾಸಗಿ ಬಸ್ಸಿನ ಚಾಲಕ ಮಾಮೂಲಾಗಿ ಈ ಹೊಟೇಲ್ನ ಮುಂಭಾಗದಲ್ಲಿ ಬಸ್ಸು ನಿಲ್ಲಿಸಿ ಟೀ ಕುಡಿಯುವುದು ವಾಡಿಕೆ. ಅದರಂತೆ ಇಂದು ಬಸ್ಸನ್ನು ನಿಲ್ಲಿಸುವ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಮೃತ ರವಿಯೂ ಬಸ್ಸು ನಿಲ್ಲಿಸುವ ವೇಳೆಯಲ್ಲಿ ಅದೇ ಹೊಟೇಲ್ನಿಂದ ಟೀ ಕುಡಿದು ಹೊರ ಬಂದಾಗ ಬಸ್ಸಿನ ಟಯರ್ಗೆ ಆಕಸ್ಮಿಕವಾಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ಈತ ಚಕ್ರಕ್ಕೆ ಸಿಕ್ಕಿಕೊಂಡಿದ್ದನ್ನು ನೋಡಿದ ಹೊಟೇಲ್ನವರು ಹಾಗೂ ಆಜುಬಾಜಿನವರು ಬೊಬ್ಬೆ ಇಟ್ಟಾಗ ಚಾಲಕ ತಕ್ಷಣ ಬಸ್ಸಿಗೆ ಬ್ರೇಕ್ ಹಾಕಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಮರಿಸ್ವಾಮಿ ಸಿಬ್ಬಂದಿಗಳು ಮಹಜರು ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿ ವಾರಸುದಾ ರರಿಗೆ ಒಪ್ಪಿಸಿದರು. ಪೊಲೀಸರು ಬಸ್ನ್ನು ವಶ ಪಡಿಸಿಕೊಂಡು ಬಸ್ನ ಚಾಲಕ ಲಿಂಗಪ್ಪ ಎಂಬಾತನನ್ನು ಬಂಧಿಸಿದ್ದಾರೆ.
ಮೃತ ರವಿ ಮೂಲತಃ ಹುಣಸೂರು ಕಡೆಯವನಾಗಿದ್ದು ಒಂದು ವರ್ಷದಿಂದ ವೀರಾಜಪೇಟೆಯಲ್ಲಿ ಗುಜರಿ ಹೆಕ್ಕುವ ಕೆಲಸ ಮಾಡುತ್ತಿದ್ದನು. ಇಲ್ಲಿನ ಮತ್ಸ್ಯಭವನದ ಮುಂದಿನ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದನು ಇಂದು ಬೆಳಿಗ್ಗೆ ಟೀ ಕುಡಿದು ಪತ್ನಿ ಮಕ್ಕಳಿಗೂ ಟೀ ತಿಂಡಿ ತರುವುದಾಗಿ ಹೇಳಿ ಹೊಟೇಲ್ಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.