ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು

ನವದೆಹಲಿ, ಜ. 7: ನಿರ್ಭಯಾ ಅತ್ಯಾಚಾರಿಗಳಿಗೆ ಜ.22ಕ್ಕೆ ಗಲ್ಲಿಗೇರಿಸಲು ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ. ತಾ. 22 ರಂದು ಬೆಳಿಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ಕೋರ್ಟ್ ಆದೇಶಿಸಿದೆ. ಈ ಮೂಲಕ 7 ವರ್ಷಗಳ ಬಳಿಕ ಇದೀಗ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ. ನಿರ್ಭಯಾ ಪ್ರಕರಣ ಇಡೀ ಪ್ರಪಂಚದ ಗಮನ ಸೆಳೆದಿತ್ತು. ಡಿಸೆಂಬರ್ 18 ರಂದು ಸುಪ್ರೀಂ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿತ್ತು. ಅಪರಾಧಿಗಳಾದ ಅಕ್ಷಯ್, ಮುಖೇಶ್, ವಿನಯ್ ಶರ್ಮಾ, ಪವನ್ ಗುಪ್ತಾನನ್ನು ಗಲ್ಲಿಗೇರಿಸಲಾಗುವುದು. ಈ ಪ್ರಕರಣದಲ್ಲಿ ಎಲ್ಲಾ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ. ಅವರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕ, ಮೂರು ವರ್ಷಗಳ ಜೈಲುವಾಸದ ನಂತರ ಬಿಡುಗಡೆಯಾಗಿದ್ದಾನೆ. ಮತ್ತೊಬ್ಬ ಆರೋಪಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಾರಣಾ ನ್ಯಾಯಾಲಯ 2013 ರ ಸೆಪ್ಟೆಂಬರ್‍ನಲ್ಲಿ ಉಳಿದ ನಾಲ್ವರಿಗೆ ಮರಣದಂಡನೆ ವಿಧಿಸಿತು. 2014ರ ಮಾರ್ಚ್‍ನಲ್ಲಿ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪನ್ನು 2017ರ ಮೇನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಅಪರಾಧಿಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. 2012ರ ಡಿಸೆಂಬರ್ 16 ರಂದು 23 ವರ್ಷದ ನಿರ್ಭಯಾಳ ಮೇಲೆ ಅಪರಾಧಿಗಳು ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಅತ್ಯಂತ ಕ್ರೂರವಾಗಿ ಹಿಂಸಿಸಿ, ಬಸ್ಸಿನಿಂದ ಹೊರದಬ್ಬಿ ಪರಾರಿಯಾಗಿದ್ದರು. 13 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿ ನಿರ್ಭಯಾ 2012 ರ ಡಿಸೆಂಬರ್ 29ರಂದು ಸಿಂಗಾಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಬಲವಂತದ ಬಂದ್ ವಿರುದ್ಧ ಕ್ರಮ

ಬೆಂಗಳೂರು, ಜ. 7: ಮುಷ್ಕರದ ಹಿನ್ನೆಲೆ ಪ್ರತಿಭಟನಕಾರರು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ, ಸಾರ್ವಜನಿಕ ಶಾಂತಿಗೆ ಭಂಗ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಪ್ರತಿಭಟನೆ ನಡೆದಿವೆ. ನಾಳೆಯ ಮುಷ್ಕರಕ್ಕೆ ಕೆಲವು ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ರೂ. 15 ಲಕ್ಷ ಬಾಂಡ್ ಬರೆಸಿಕೊಂಡು 46 ಸಂಘಟನೆಗಳಿಗೆ ಅನುಮತಿ ನೀಡಲಾಗಿದೆ ಎಂದರು. ನಗರದಲ್ಲಿ ಯಾವುದೇ ಸ್ಥಳದಲ್ಲಿ ಕಲ್ಲು ತೂರಾಟ ನಡೆದರೆ ಆಯೋಜಕರೇ ಹೊಣೆಯಾಗಿದ್ದು, ಇದು ಸಾರ್ವಜನಿಕರ ಭದ್ರತೆ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟಿನ ಆದೇಶ ನಾವು ಪಾಲನೆ ಮಾಡುತ್ತೇವೆ ಎಂದು ಆಯುಕ್ತರು ತಿಳಿಸಿದರು.

ಬಸ್ ಸಿಬ್ಬಂದಿ ಕರ್ತವ್ಯ ಕಡ್ಡಾಯ

ಬೆಂಗಳೂರು, ಜ. 7: ಮುಷ್ಕರ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಬಸ್ ಸಂಚಾರ ಮಾಡುವಂತೆ ಎಲ್ಲಾ ನಿಗಮಗಳ ಮುಖ್ಯಸ್ಥರಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಆದೇಶ ನೀಡಿದ್ದಾರೆ. ಬಂದ್ ಸಂದರ್ಭ ಬಸ್‍ಗಳಿಗೆ ಕಲ್ಲು ತೂರುವುದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟುಮಾಡುವಂತಹ ಕ್ರಮದಲ್ಲಿ ತೊಡಗಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಮುಷ್ಕರ ನಡೆಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಈ ಸಂದರ್ಭ ನಮ್ಮ ಸಾರಿಗೆ ವ್ಯವಸ್ಥೆಯ ಬಹುಮುಖ್ಯ ಅಂಗವಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳ ಬಸ್ಸುಗಳು ಎಂದಿನಂತೆ ಕಾರ್ಯ ನಿರ್ವಹಿಸಬೇಕೆಂದು ಈಗಾಗಲೇ ಸೂಚಿಸಿ ಮುನ್ನೆಚ್ಚರಿಕೆ ವಹಿಸಲಾಗಿದೆ.

ನೌಕರರ ವಿರುದ್ಧ ಕಠಿಣ ಕ್ರಮ

ನವದೆಹಲಿ/ಬೆಂಗಳೂರು, ಜ. 7: ಕಾರ್ಮಿಕ ಸುಧಾರಣೆಗಳು, ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ಮತ್ತು ಖಾಸಗೀಕರಣ ಸೇರಿದಂತೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ತಾ. 8 ರಂದು ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರವು ಎಚ್ಚರಿಸಿದೆ. ಭಾರತೀಯ ಮಜ್ದೂರ್ ಸಂಘವನ್ನು ಹೊರತುಪಡಿಸಿ, ಕೇಂದ್ರೀಯ ಟ್ರೇಡ್ ಯೂನಿಯನ್ ಮತ್ತು ವಿವಿಧ ವಲಯಗಳಲ್ಲಿನ ಅವರ ಅಂಗಸಂಸ್ಥೆಗಳು ತಾ. 8 ರಂದು ತಮ್ಮ ಉದ್ದೇಶಿತ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕಾಗಿ ಕಾರ್ಮಿಕರು ಮತ್ತು ನೌಕರರನ್ನು ಸಜ್ಜುಗೊಳಿಸುತ್ತಿವೆ, ಕೇಂದ್ರ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸಿ ಮತ್ತು 12 ಅಂಶಗಳ ಸಾಮಾನ್ಯ ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ. ಈ ವೇಳೆ ಕೇಂದ್ರ ಸರ್ಕಾರದ ಸಿಬ್ಬಂದಿ ಸಚಿವಾಲಯದ ಆದೇಶ ಹೊರಡಿಸಿದ್ದು ಯಾವುದೇ ರೂಪದಲ್ಲಿ ಮುಷ್ಕರ ನಡೆಸುವ ಯಾವುದೇ ನೌಕರನು ಕಠಿಣ ಪರಿಣಾಮ ಎದುರಿಸಬೇಕಾಗುವುದು ವೇತನ ಕಡಿತದ ಜತೆಗೆ ಸೂಕ್ತ ಶಿಸ್ತು ಕ್ರಮವನ್ನೂ ಸಹ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೈತರ ಸಾಲ ಮನ್ನಾ ತಾತ್ಕಾಲಿಕ ಪರಿಹಾರ

ಬೆಂಗಳೂರು, ಜ. 7: ಉಚಿತ ವಿದ್ಯುತ್, ರೈತರ ಸಾಲ ಮನ್ನಾ ಎನ್ನುವುದು ತಾತ್ಕಾಲಿಕ ಪರಿಹಾರ ಮಾತ್ರ. ತಾತ್ಕಾಲಿಕ ಉಪಶಮನದಿಂದ ಕೃಷಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಕಳೆದ ಐದು ದಿನಗಳಿಂದ ನಗರದ ಜಿಕೆವಿಕೆಯಲ್ಲಿ ಆಯೋಜನೆಗೊಂಡಿದ್ದ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್, ರೈತರ ಸಾಲ ಮನ್ನಾದಿಂದ ಯಾವುದೇ ಸಾಧನೆ ಆಗುವುದಿಲ್ಲ. ನಿಜವಾಗಿ ಸಾಲ ಮನ್ನಾ ಇರುವುದೇ ಆಗಿದ್ದರೆ ನಾನು ಸಹ ಬ್ಯಾಂಕಿನಿಂದ ಹಣಪಡೆದುಕೊಳ್ಳುತ್ತಿದ್ದೆ ಎಂದರು. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎನ್ನುವುದನ್ನು ಮರೆಯಬಾರದು.

ಖಾಸಿಂ ಹತ್ಯೆ ಭಯೋತ್ಪಾದಕರಿಂದಾಗಿದೆ !

ಟೆಹ್ರಾನ್, ಜ. 7: ಇರಾನ್ ಸಂಸತ್, ಅಮೇರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಬಹುಮತದಿಂದ ಅಂಗೀಕರಿಸಿದೆ. ಇರಾನ್ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೆಮಾನಿ ಹತ್ಯೆ ಮಾಡಿದವರನ್ನು ಭಯೋತ್ಪಾದಕರು ಎಂದು ಸಂಸತ್ತು ಅನುಮೋದಿಸಿದೆ. ಅಮೇರಿಕಾ ಕೇಂದ್ರೀಯ ಕಮಾಂಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ತಿದ್ದುಪಡಿ ವಿಧೇಯಕವನ್ನು ಸಂಸತ್ ಸದಸ್ಯರು ಅನುಮೋದಿಸಿದ್ದಾರೆ. ಕುರ್ದಿಶ್ ಪಡೆಯ ಕಮಾಂಡರ್ ಜನರಲ್ ಖಾಸಿಂ ಸುಲೆಮಾನಿ ಹತ್ಯೆ ನಡೆಸಿದ ಎಲ್ಲಾ ಕಮಾಂಡರ್‍ಗಳು ಹಾಗೂ ಅಮೇರಿಕಾ ಸಿಬ್ಬಂದಿಯನ್ನು ಭಯೋತ್ಪಾದಕರು ಎಂದು ಇರಾನ್ ಸಂಸತ್ ಘೋಷಿಸಿದೆ. ಅಂತೆಯೇ ಸಂಸತ್ತಿನ ಸ್ಪೀಕರ್ ಅಲಿಲಾರಿಜಾನಿ, ಕುರ್ದಿಶ್ ಪಡೆಯ ಶಾಖೆಗಾಗಿ ಪ್ರಸಕ್ತ ಇರಾನಿಯನ್ ವರ್ಷದಲ್ಲಿ ರಾಷ್ಟ್ರೀಯ ಅಭಿವೃದ್ಧಿ ನಿಧಿಯಿಂದ 200 ಮಿಲಿಯನ್ ಯುರೋಗಳನ್ನು ಪಾವತಿಸಲಾಗುವುದು.

ಮಾಧ್ಯಮ ಸಮ್ಮಾನ್ ಪ್ರಶಸ್ತಿ ಪ್ರದಾನ

ನವದೆಹಲಿ, ಜ. 7: ನಾಗರಿಕರಲ್ಲಿ ಯೋಗದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ 30 ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮೊದಲ ಅಂತರರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಿದರು. ಮುದ್ರಣ ಮಾಧ್ಯಮಗಳಾದ ಉದಯವಾಣಿ ಬೆಂಗಳೂರು, ಒಡಿಶಾ ಎಕ್ಸ್‍ಪ್ರೆಸ್, ರೊಜ್ನಾಮಾ ರಾಷ್ಟ್ರೀಯ ಸಹಾರಾ ಹಾಗೂ ರೇಡಿಯೋಗಳಾದ ಫೀವರ್ 104 ಎಫ್‍ಎಂ, ಆಲ್ ಇಂಡಿಯಾ ರೇಡಿಯೋ ನವದೆಹಲಿ, ರೇಡಿಯೋ ಮಿಸ್ಟಿ 94.3 ನೇಪಾಳಿ ಮತ್ತು ರೇಡಿಯೋ ಮತ್ತು ಸಂದೇಶ್ ನ್ಯೂಸ್ ಗುಜರಾತಿ, ಅಮೃತಾ ಟೆಲಿವಿಷನ್ ಮಲಯಾಳಂ, ಡಿಡಿ ಕೇಂದ್ರ ಶ್ರೀನಗರ ನ್ಯೂಸ್ ದೆಹಲಿ, ಕೇಂದ್ರ ಉತ್ಪಾದನಾ ಕೇಂದ್ರ, ದೂರದರ್ಶನ ನವದೆಹಲಿ ಮತ್ತು ದೂರದರ್ಶನದ ಇತರರು ಈ ಪ್ರಶಸ್ತಿಗೆ ಭಾಜನರಾದರು.