ಸೋಮವಾರಪೇಟೆ, ಜ.5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ, ಶಾಂತಳ್ಳಿ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಚೌಡ್ಲು ಪ್ರಾ.ಕೃ.ಪ. ಸಹಕಾರಿ ಸಂಘದ ಸಹಯೋಗದೊಂದಿಗೆ ಇಲ್ಲಿನ ಚೌಡ್ಲು ರೈತ ಸಹಕಾರ ಭವನದಲ್ಲಿ ಶಾಂತಳ್ಳಿ ವಲಯ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ನಡೆಯಿತು.

ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಸಂಕಷ್ಟದಲ್ಲಿರುವ ಮಂದಿಗೆ ಶ್ರೀಕ್ಷೇತ್ರದಿಂದ ಆರ್ಥಿಕ ಸಹಾಯ ಹಸ್ತ ನೀಡುತ್ತಿರುವದು ಶ್ಲಾಘನೀಯ ಎಂದರು.

ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸುವದರಿಂದ ಧಾರ್ಮಿಕ ಪ್ರಜ್ಞೆ ಜಾಗೃತಿಯಾಗುತ್ತದೆ. ಸಮಾಜದಲ್ಲೂ ಶಾಂತಿ ಸೌಹಾರ್ದತೆ ನೆಲೆಸುತ್ತದೆ ಎಂದು ಸ್ವಾಮೀಜಿಗಳು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜೆ. ದೀಪಕ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ವಿಭಾಗದಲ್ಲಿ ಸೇವಾ ಕಾರ್ಯಗಳನ್ನು ನಿರ್ವಹಿಸಿದ ನಂತರ ಸಂಘದ ಸದಸ್ಯರುಗಳು ಬ್ಯಾಂಕ್ ವ್ಯವಹಾರ, ಸಭೆ ನಡೆಸುವದು ಸೇರಿದಂತೆ ಶಿಸ್ತಿನ ಪಾಠಗಳನ್ನು ಕಲಿಯುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಚೌಡ್ಲು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ವಿದ್ಯಾಭ್ಯಾಸ, ಸ್ವಯಂ ಉದ್ಯೋಗ, ದುಶ್ಚಟ ಮುಕ್ತ ಸಮಾಜ ಸೇರಿದಂತೆ ಹಲವಾರು ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಯೋಜನೆಯನ್ನು ಯಶಸ್ವಿಯಾಗಿಸಿಕೊಂಡು ಬಂದಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಂಗಮ್ಮ, ವಕ್ಫ್ ಮಂಡಳಿಯ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಸೋಮೇಶ್, ಕರವೇ ಮಹಿಳಾ ಘಟಕದ ಅಶ್ವಿನಿ ಕೃಷ್ಣಕಾಂತ್, ಯೋಜನೆಯ ಶಾಂತಳ್ಳಿ ವಲಯ ಮೇಲ್ವಿಚಾರಕ ಸುಬ್ರಮಣ್ಯ, ಸೇವಾ ಪ್ರತಿನಿಧಿ ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.