ಕೊಡ್ಲಿಪೇಟೆ, ಜ. 5: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಕಳೆದ ಏಳು ದಶಕಗಳಿಂದ ದೇಶವನ್ನಾಳಿದ ರಾಜಕೀಯ ಪಕ್ಷಗಳು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿವೆ ಎಂದು ಮಾಜಿ ಸಚಿವರೂ ಆದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಹೇಳಿದರು.

ಕೊಡಗು ಜಿಲ್ಲಾ ಬಹುಜನ ವಿದ್ಯಾರ್ಥಿ ಸಂಘ ಕೊಡ್ಲಿಪೇಟೆ ಶಾಖೆ ವತಿಯಿಂದ ಏರ್ಪಡಿಸಿದ್ದ ಸಂವಿಧಾನ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನರಿಗೆ ಸಂವಿಧಾನ ರಚನೆ ಕುರಿತ ಇತಿಹಾಸವನ್ನು ತಿಳಿಸುವ ಉದ್ದೇಶದಿಂದ ಸಂವಿಧಾನ ಕುರಿತು ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಬಿವಿಎಸ್ ವತಿಯಿಂದ ಪ್ರಬಂಧ ಆಯೋಜಿಸಲಾಗಿದೆ ಎಂದರು.

1947 ಆಗಸ್ಟ್ 29 ರಂದು ಡಾ.ಅಂಬೇಡ್ಕರ್ ಅವರನ್ನು ಸಂವಿಧಾನದ ಕರಡು ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂವಿಧಾನದ ಕರಡನ್ನು ರಚಿಸುವ ಸಂಪೂರ್ಣ ಜವಬ್ದಾರಿ ಕರಡು ಸಮಿತಿಯದ್ದಾಗಿತ್ತು. ಈ ಸಮಿತಿಯಲ್ಲಿ ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಡಾ.ಕೆ.ಎಂ.ಮುನ್ಷಿ, ಸೈಯದ್ ಮಹಮದ್ ಸಾದುಲ್ಲಾ, ಎನ್.ಮಾಧವರಾವ್, ಟಿ.ಟಿ.ಕೃಷ್ಣಮಾಚಾರಿ ಸದಸ್ಯರಾಗಿದ್ದರು ಎಂದು ನೆನಪಿಸಿದರು.

1949 ನವೆಂಬರ್ 26 ರಂದು ಸಂವಿಧಾನ ಸಭೆಯಲ್ಲಿ ಸಂವಿಧಾನ ಕರಡು ಅರ್ಪಿಸುತ್ತಾ ಡಾ.ಅಂಬೇಡ್ಕರ್ ಅವರು ಭಾರತೀಯರಾದ ನಾವು ಇಂದಿನಿಂದ ಒಬ್ಬ ವ್ಯಕ್ತಿ- ಒಂದು ಓಟು- ಒಂದು ಮೌಲ್ಯ ಎಂಬ ರಾಜಕೀಯ ಸಮಾನತೆಯನ್ನು ಸಾಧಿಸಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳು ಇನ್ನು ಹಾಗೆಯೇ ಇವೆ. ಈ ಅಸಮಾನತೆಯನ್ನು ಹೋಗಲಾಡಿಸಬೇಕು ಎಂದು ಅಂಬೇಡ್ಕರ್ ನುಡಿದಿದ್ದಾಗಿ ನೆನಪಿಸಿದರು.ಜಿಲ್ಲಾ ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಬಹುಜನ ವಿದ್ಯಾರ್ಥಿ ಸಂಘವು ಸಂವಿಧಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಶಾಲಾ ಕಾಲೇಜು ಮಕ್ಕಳಿಗೆ ಸಂವಿಧಾನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಪಾತ್ರ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನ ರೂ.1ಲಕ್ಷ,ದ್ವಿತೀಯ ರೂ.50 ಸಾವಿರ ಹಾಗೂ ತೃತೀಯ ರೂ.25 ಹಾಗೂ ಸಮಧಾನಕರ ಬಹುಮಾನ ನಿಗದಿಪಡಿಸಲಾಗಿದೆ ಎಂದರು.

ಈ ಸಂದರ್ಭ ಬಹುಜನ ವಿದ್ಯಾರ್ಥಿ ಸಂಘದ ಮುಖಂಡರಾದ ಪ್ರಶಾಂತ್, ಜಯರಾಜ್, ಸತೀಶ್, ಮಹೇಶ್, ತ್ಯಾಗರಾಜ್, ಸುರೇಶ್, ಯೋಗೇಶ್, ಬೋಜಪ್ಪ, ಯೋಗೇಂದ್ರ ಉಪಸ್ಥಿತರಿದ್ದರು. ಕೊಡ್ಲಿಪೇಟೆ ಕಲಾತಂಡದ ಶಾಂತಕುಮಾರ್ ಹಾಗೂ ಪುನೀತ್ ನೇತೃತ್ವದಲ್ಲಿ ಕ್ರಾಂತಿಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.