ಕುಟ್ಟ, ಜ. 5: ಕುಟ್ಟ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ಮಲೆಯಾಳಂ ಚಿತ್ರದ ಚಿತ್ರೀಕರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಅವಕಾಶ ನೀಡಿರುವ ಬಗ್ಗೆ ಸ್ಥಳೀಯ ಮುಖಂಡ ಮುಕ್ಕಾಟಿರ ನವೀನ್ ಅಯ್ಯಪ್ಪ, ಕೊಡಗು ಲೇಖಕರು ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ಆಸ್ಪತ್ರೆಯನ್ನು ಮಲೆಯಾಳಂ ಫಲಕಗಳೊಂದಿಗೆ ಮಾರ್ಪಾಡುಗೊಳಿಸಿ, ‘ಕುರುಕನ್ ಮೂಲ ಮಿಷನ್ ಹಾಸ್ಪಿಟಲ್’ ಎಂದು ಇಂಗ್ಲೀಷ್‍ನಲ್ಲಿಯೂ ಫಲಕ ಹಾಕಲಾಗಿದೆ. ಮೂರು ದಿನಗಳ ತನಕ ಶೂಟಿಂಗ್‍ಗೆ ನೀಡಿರುವುದಾಗಿ ಚಿತ್ರೀಕರಣ ತಂಡ ಪ್ರತಿಕ್ರಿಯಿಸಿದೆ. ಈ ರೀತಿ ಮಲೆಯಾಳಂ ಬಳಕೆಗೆ ಆಕ್ಷೇಪಿಸಿರುವ ಪ್ರಮುಖರು ಕನ್ನಡಕ್ಕೆ ಅನ್ಯಾಯ ಎಸಗಲಾಗಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್ ಪ್ರತಿಕ್ರಿಯೆ ಬಯಸಿದಾಗ; ಆಸ್ಪತ್ರೆಗೆ ಹಾನಿಗೊಳಿಸದಂತೆ, ರೋಗಿಗಳಿಗೆ ತೊಂದರೆ ಆಗದಂತೆ ಶುಲ್ಕ ಪಡೆದು ಚಿತ್ರೀಕರಣಕ್ಕೆ ಷರತ್ತುಗಳೊಂದಿಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಮ್ಮ ಅರಿವಿಗೆ ಬಂದಿಲ್ಲವೆಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಕ್ರಮಕ್ಕೆ ಆಗ್ರಹ: ಕುಟ್ಟದ ನವೀನ್ ಅಯ್ಯಪ್ಪ ಪ್ರತಿಕ್ರಿಯಿಸಿ, ತಾವು ಸೇರಿದಂತೆ ಗ್ರಾ.ಪಂ. ಪ್ರತಿನಿಧಿಗಳು ಆಸ್ಪತ್ರೆ ಸಮಿತಿಯಲ್ಲಿದ್ದರೂ, ಯಾರ ಗಮನಕ್ಕೂ ಬಂದಿಲ್ಲ. ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

ಪರಿಶೀಲಿಸಿ ಕ್ರಮ: ವೀರಾಜಪೇಟೆ ಆರೋಗ್ಯ ಅಧಿಕಾರಿಯಿಂದ ಕುಟ್ಟ ಆಸ್ಪತ್ರೆಯ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಭೇಟಿ: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕುಟ್ಟ ವಲಯ ಕರವೆ ಅಧ್ಯಕ್ಷ ಎಂ.ಎಸ್. ಸುರೇಶ್, ಕಾರ್ಯದರ್ಶಿ ಜೆ.ಎಂ. ರಾಜ, ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಮುಕ್ಕಾಟಿರ ನವೀನ್ ಅಯ್ಯಪ್ಪ, ಗ್ರಾಮ ಪಂಚಾಯತಿ ಸದಸ್ಯ ರಾಮಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಚಿತ್ರೀಕರಣ ತಂಡದ ಕ್ರಮವನ್ನು ಖಂಡಿಸಿದರು.

ಆ ಸಂದರ್ಭ ಚಿತ್ರೀಕರಣ ತಂಡದ ವ್ಯವಸ್ಥಾಪಕ ರೋಜನ್ ತಮ್ಮಿಂದ ತಪ್ಪಾಗಿದ್ದು, ತಾವು ಈ ನಾಡಿನ ಭಾಷೆಗೆ ಗೌರವ ನೀಡುವುದಾಗಿ ತಿಳಿಸಿ ಸಮುದಾಯ ಕೇಂದ್ರದ ಹೆಸರಿನ ಮೇಲೆ ಹಾಕಿದ್ದ ಮಲಯಾಳಂ ಭಾಷೆಯ ನಾಮ ಫಲಕವನ್ನು ತೆರವುಗೊಳಿಸಿದರು.

ಈ ಸಂದರ್ಭ ಗಾ.ಪಂ. ಮಾಜಿ ಸದಸ್ಯ ತೀತಿರ ಎ. ಮಂಜುನಾಥ್, ಎಂ.ಕೆ. ಚಂದನ್ ಕಾಮತ್, ಚಕ್ಕೇರ ಗಣಪತಿ, ಹೊಟ್ಟೆಂಗಡ ತಿಮ್ಮಯ್ಯ, ತೀತಿರ ಗಣಪತಿ, ಹೆಚ್.ಎಂ. ತನು, ಮಚ್ಚಮಾಡ ಅಮಿತ್, ಚೇಂದ್ರೀಮಾಡ ರಶನ್, ಟಿ.ಎನ್. ದರ್ಶನ, ಚೋಕಿರ ಕಾರ್ತಿಕ್, ಮುಂಡುಮಾಡ ಕರುಂಬಯ್ಯ ಇದ್ದರು.