ಸಿದ್ದಾಪುರ. ಜ.6: ಕರಡಿಗೋಡು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಹತ್ತಕ್ಕಿಂತ ಅಧಿಕ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಎರಡು ದಿನಗಳಿಂದ ಇಂಜಿಲಗೆರೆ ಪುಲಿಯೇರಿ ಹಾಗೂ ಕರಡಿಗೋಡು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ವೀರಾಜಪೇಟೆ ವಿಭಾಗದ ಎ.ಸಿ.ಎಫ್. ರೋಶಿನಿ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿ ಮಾಲ್ದಾರೆ ಅರಣ್ಯಕ್ಕೆ ಅಟ್ಟಲಾಯಿತು. ಈ ಸಂದರ್ಭ 6 ದೊಡ್ಡ ಆನೆಗಳು 4 ಮರಿಯಾನೆಗಳು ಕಂಡುಬಂದಿವೆ ಎಂದು ಉಪವಲಯ ಅರಣ್ಯಾಧಿಕಾರಿ ಶಿವಕುಮಾರ್ ತಿಳಿಸಿದರು. ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಮರಿ ಹಾಕಿರುವ ಕಾಡಾನೆಗಳು ಕಾಫಿ ಹಣ್ಣುಗಳನ್ನು ತಿಂದು ರುಚಿ ಕಂಡುಕೊಂಡಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅರಣ್ಯಕ್ಕೆ ತೆರಳಿದ ಆನೆಗಳು ಹಿಂತಿರುಗಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇದರಿಂದ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.