ಗೋಣಿಕೊಪ್ಪಲು, ಜ.5: ಪ್ರತಿಷ್ಠಿತ ರಂಗಾಯಣದ ನಿರ್ದೇಶಕರಾಗಿ ನೇಮಕಗೊಂಡ ರಂಗಭೂಮಿ ಕಲಾವಿದ ಪೊನ್ನಂಪೇಟೆಯ ಅಡ್ಡಂಡ ಕಾರ್ಯಪ್ಪ ಅವರು ಅಧಿಕಾರ ವಹಿಸಿಕೊಂಡ ತರುವಾಯ ಮೊದಲ ಬಾರಿಗೆ ಪೊನ್ನಂಪೇಟೆಗೆ ಆಗಮಿಸಿದ ಸಂದರ್ಭ ಪೊನ್ನಂಪೇಟೆಯ ಪೌರ ನಾಗರಿಕರು, ನಿಸರ್ಗ ಯುವತಿ ಮಂಡಳಿ, ಹಿರಿಯ ನಾಗರಿಕ ಸಮಿತಿಯ ಹಿರಿಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಟೌನ್ ಬ್ಯಾಂಕ್ ಸಹಕಾರ ಸಂಘದ ಸಭಾಂಗಣದಲ್ಲಿ ಹಿರಿಯ ವೈದ್ಯರಾದ ಡಾ.ಶಿವಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪೊನ್ನಂಪೇಟೆ ಗ್ರಾಮ ಪಂಚಾ ಯಿತಿಯ ಅಧ್ಯಕ್ಷರಾದ ಮೂಕಳೇರ ಸುಮಿತ್ರ ಗಣೇಶ್, ಉಪಾಧ್ಯಕ್ಷರಾದ ಮಂಜುಳಾ, ಜಿ.ಪಂ.ಸದಸ್ಯರಾದ ಶ್ರೀಜಾ ಶಾಜಿ ಅಚ್ಚುತ್ತನ್,ರಾಮಕೃಷ್ಣ ಆಶ್ರಮದ ಸ್ವಾಮಿ ಬೋಧಸ್ವರೂಪ ನಂದಾಜಿ ಮಹರಾಜ್, ಹಿರಿಯ ನಾಗರಿಕ ವೇದಿಕೆಯ ಅದ್ಯಕ್ಷರಾದ ಪಿ.ಬಿ.ಪೂಣಚ್ಚ ಪ್ರಮುಖರಾದ ಚಪ್ಪುಡೀರ ಸೋಮಯ್ಯ, ಆಲೀರ ಎರ್ಮು ಹಾಜಿ, ಎಂ.ಪಿ.ಅಪ್ಪಚ್ಚು, ಐನಂಡ ಬೋಪಣ್ಣ, ಮೂಕಳೇರ ಕುಶಾಲಪ್ಪ, ಬಾಲಕೃಷ್ಣ ರೈ, ಡಾ.ಚಂದ್ರಶೇಖರ್, ಸಾಜಿ ಅಚ್ಚುತ್ತನ್ ಮುಂತಾದ ಗಣ್ಯರು ದೇವಾಲಯದಿಂದ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದರು. ಈ ಸಂದರ್ಭದಲ್ಲಿ ಹಿರಿಯರು ಸೇರಿದಂತೆ ಗಣ್ಯರು ಕಾರ್ಯಪ್ಪ ಅವರನ್ನು ಸನ್ಮಾನಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಅಡ್ಡಂಡ ಕಾರ್ಯಪ್ಪ ಕಲಾವಿದರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಮುಂದೆಯೂ ಸೇವೆ ಸಲ್ಲಿಸಲಿದ್ದಾರೆ. ಇರುವ ಅವಕಾಶ ಬಳಸಿಕೊಂಡು ಉತ್ತಮ ಕೆಲಸ ಮಾಡಲಿ, ಕೊಡಗಿನ ಕೀರ್ತಿ ಮತ್ತಷ್ಟು ಹೆಚ್ಚಿಸುವುವಂತಾಗಲಿ ಎಂದು ಹಾರೈಸಿದರು.

ಬೋದ ಸ್ವರೂಪನಂದಾಜಿ ಮಹರಾಜ್ ಮಾತನಾಡಿ ಪೊನ್ನಂ ಪೇಟೆ ಮಣ್ಣಿಗೆ ವಿಶೇಷ ಗುಣಗಳಿವೆ, ಮೈಸೂರಿಗೆ ಸೀಮಿತವಾಗದೆ ಕೊಡಗಿನಲ್ಲೂ ರಂಗಮಂದಿರ ನಿರ್ಮಾಣವಾಗುವ ಬಗ್ಗೆ ಗಮನ ಹರಿಸಲಿ, ಭಾರತಿಯ ಸಂಸ್ಕೃತಿಗಳನ್ನು ಎತ್ತಿ ಹಿಡಿಯಲಿ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಡ್ಡಂಡ ಕಾರ್ಯಪ್ಪ ಈ ಪುಣ್ಯ ಭೂಮಿಯಲ್ಲಿ ಸನ್ಮಾನ ಸ್ವೀಕರಿಸಿ ರುವುದು ಹೆಮ್ಮೆ ತಂದಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವು ದಾಗಿ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭ ಎಸ್.ಎನ್.ಡಿ.ಪಿ. ನಾಗರಿಕ ವೇದಿಕೆ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ, ನಿಸರ್ಗ ಯುವತಿ ಮಂಡಳಿ, ರಾಮಕೃಷ್ಣ ಆಶ್ರಮ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅಡ್ಡಂಡ ಕಾರ್ಯಪ್ಪ ಅವರನ್ನು ಗೌರವಿಸಿದರು.

ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷೆ ರೇಖಾ ಶ್ರೀಧರ್ ಸ್ವಾಗತಿಸಿದರು. ಮನೆಯಪಂಡ ಶೀಲಾ ಬೋಪಣ್ಣ, ನಿರೂಪಿಸಿದರು. ನಿರ್ಮಲ ಬೋಪಣ್ಣ ಪ್ರಾರ್ಥನೆ ನೆರವೇರಿಸಿದರು

ಕಲಾವಿದ ಎಸ್.ಟಿ. ಗಿರೀಶ್ ಜಾನಪದ ಗೀತೆ ಹಾಡಿದರು. ಪೌರರಾದ ವಾಸು ಉತ್ತಪ್ಪ, ಅಡ್ಡಂಡ ಅನಿತಾ ಕಾರ್ಯಪ್ಪ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- ಹೆಚ್.ಕೆ.ಜಗದೀಶ್.