ವೀರಾಜಪೇಟೆ, ಜ.5: ವೀರಾಜಪೇಟೆ ನಗರದ ಒಂಬತ್ತನೇ ಬ್ಲಾಕ್ ಸುಭಾಶ್ ನಗರದಲ್ಲಿ ಸುಮಾರು ರೂ. ಎಂಟು ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ಶುಕ್ರವಾರ ಸ್ಥಳೀಯ ವಾರ್ಡ್, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಉದ್ಘಾಟನೆ ಮಾಡಿದರು.

ಬಹಳ ವರ್ಷಗಳಿಂದ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಚುನಾವಣೆ ವೇಳೆ ಭರವಸೆ ನೀಡಿದ್ದ ಮಹಮ್ಮದ್ ರಾಫಿ ಪಟ್ಟಣ ಪಂಚಾಯಿತಿಯ ಸಾಮಾನ್ಯ ನೀತಿ ಅಡಿಯಲ್ಲಿ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಅಂದಾಜು 103 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಚಾಲನೆ ನೀಡಿದರು.

ಚುನಾವಣೆ ಕಳೆದು ಬರೋಬ್ಬರಿ ಒಂದೂವರೆ ವರ್ಷ ಕಳೆದರೂ ಕೂಡ ಇಲ್ಲಿಯವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ನಡೆಯಲಿಲ್ಲ. ಆದರೂ ಈ ಕಾರ್ಯಕ್ಕೆ ಸಹಕರಿಸಲು ಮುಖ್ಯ ಕಾರಣಕರ್ತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮತ್ತು ಅಭಿಯಂತರ ಹೇಮ್‍ಕುಮಾರ್ ಹಾಗೂ ಗುತ್ತಿಗೆದಾರ ಸತೀಶ್ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಮಹಮ್ಮದ್ ರಾಫಿ ತಿಳಿಸಿದರು.

ಈ ಸಂದರ್ಭ ಸ್ಥಳೀಯ ನಿವಾಸಿಗಳು ಹಾಗೂ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಬಡಾವಣೆ ನಿವಾಸಿಗಳ ಪರವಾಗಿ ಮಹಮ್ಮದ್ ರಾಫಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ¨ಡಾವಣೆಗೆ ಉತ್ತಮ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋರಿದರು.

ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಟ್ಟಣ ಪಂಚಾಯಿತಿ ಸದಸ್ಯರಾದ ಡಿ.ಪಿ. ರಾಜೇಶ್, ಸಿ.ಕೆ. ಪ್ರಥ್ವಿನಾಥ್, ಎಸ್.ಎಚ್. ಮತೀನ್, ಸೈನೂದ್ದಿನ್, ಧೀರಜ್, ಸುಮ, ಸಂತೋಷ್, ಜಿಮ್ಮಿ, ಜುಬೇರ್, ಸೇರಿದಂತೆ ಸ್ಥಳಿಯ ಬಡಾವಣೆ ನಿವಾಸಿಗಳು ಹಾಜರಿದ್ದರು.