ಮಡಿಕೇರಿ, ಜ. 4: ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸಲ್ಮಾನರು ಮತ್ತು ಪಾಕಿಸ್ತಾನವನ್ನು ಚರ್ಚಿತ ವಿಷಯವನ್ನಾಗಿ ಪ್ರತಿಬಿಂಬಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳ ಮೂಲಕ ದೇಶದಲ್ಲಿ ಅಶಾಂತಿ ಮೂಡಿಸುತ್ತಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ. ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಮುಸಲ್ಮಾನರ ಬಗ್ಗೆ ಕೇಂದ್ರದ ನಿಲುವೇನು ಎನ್ನುವ ಬಗ್ಗೆ ಸ್ಪಷ್ಟತೆ ಬೇಕೆಂದು ಒತ್ತಾಯಿಸಿ ದರು. ಸಿಎಎ ಕಾಯ್ದೆಯನ್ನು ಅನಗತ್ಯ ವಾಗಿ ಹೇರುವ ಮೂಲಕ ಜಾತಿ ಆಧಾರದಲ್ಲಿ ವಿಭಜನೆ ರಾಜಕಾರಣ ವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಯೆಂದು ಟೀಕಿಸಿದರು. ಒಂದು ವರ್ಗವನ್ನು ಬಿಟ್ಟು ದೇಶ ಕಟ್ಟುವ ಕೆಲಸ ಬೇಡವೆಂದು ತಿಳಿಸಿದ ಅವರು ಭಾರತ ಸರ್ವರಿಗೂ ಸಮಾನತೆ ಸಹಬಾಳ್ವೆ ನೀಡುವ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವುದನ್ನು ಕೇಂದ್ರ್ರದ ಬಿಜೆಪಿ ಸರ್ಕಾರಕ್ಕೆ ನೆನಪಿಸುವ ಅಗತ್ಯವಿದೆಯೆಂದು ಹೇಳಿದರು.
ಭಯೋತ್ಪಾದಕರಿಗೆ ಭಾರತೀಯ ಪೌರತ್ವ ನೀಡಬಾರದು ಎನ್ನುವ ಆಗ್ರಹವನ್ನೂ ಕಾಂಗ್ರೆಸ್ ಕೂಡ ಮಾಡುತ್ತದೆ. ಭಾರತದಲ್ಲೆ ಹುಟ್ಟಿ ಬೆಳೆದ ಮುಸಲ್ಮಾನರನ್ನು ಪ್ರತ್ಯೇಕವಾಗಿ ನೋಡುವುದನ್ನು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತಿದೆ. ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವುದ ಲ್ಲದೆ, ಕಾನೂನು ಸುವ್ಯವಸ್ಥೆ ಕೂಡ ಹದಗೆಟ್ಟಿದೆ. ನಿಷೇಧಾಜ್ಞೆ ಜಾರಿ ಮೂಲಕ ಹೋರಾಟದ ಧ್ವನಿಯನ್ನು ದಮನಿಸಲಾಗುತ್ತಿದೆ ಎಂದು ಶಾಹಿದ್ ಆರೋಪಿಸಿದರು.
ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹಳಷ್ಟು ಉದ್ಯಮಿಗಳು ವಂಚನೆ ಮಾಡಿ ದೇಶವನ್ನು ತೊರೆದಿದ್ದಾರೆ ಎಂದು ಅವರು ಆರೋಪಿಸಿದರು. ಈ ಹಿಂದೆ ಪಾಕಿಸ್ತಾನದ ವಿರುದ್ಧ ಇಂದಿರಾಗಾಂಧಿ ನೇತೃತ್ವದ ಸರ್ಕಾರ ಕೂಡ ಸೆಣಸಾಡಿ ಜಯಗಳಿಸಿದೆ. ಇಂದಿನ ಬಿಜೆಪಿ ಸರ್ಕಾರ ಮುಸಲ್ಮಾನರು ಮತ್ತು ಪಾಕಿಸ್ತಾನದ ಹೆಸರು ಹೇಳಿ ಮತ ವಿಭಜನೆಯಲ್ಲಷ್ಟೆ ತೊಡಗಿದೆ ಯೆಂದು ಶಾಹಿದ್ ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಅಧಿಕಾರ ಹಿಡಿಯುವು ದಕ್ಕಾಗಿ ಯಾವ ಮಟ್ಟಕ್ಕಾದರು ಹೋಗಲು ತಯಾರಿರುವ ಬಿಜೆಪಿ, ಸಿಎಎ ಕಾಯ್ದೆ ಮೂಲಕ ಮುಸಲ್ಮಾನರನ್ನು ಗುರಿಯಾಗಿಸಿ ಅಶಾಂತಿ ಮೂಡಿಸಿ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಪಿ.ಎಂ. ಖಾಸಿಂ ಮಾತನಾಡಿ, ಬಿಜೆಪಿ ಮುಸಲ್ಮಾನರ ಹಾಗೂ ಪಾಕಿಸ್ತಾನದ ಹೆಸರು ಹೇಳಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಪಾಕಿಸ್ತಾನದ ಹೆಸರು ಅಳಿಸಿ ಹೋದರೆ ಈ ದೇಶದಲ್ಲಿ ಬಿಜೆಪಿಗೆ ಉಳಿಗಾಲ ವಿಲ್ಲವೆಂದು ಅವರು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಸ್. ಪೂವಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ. ಸುರೇಶ್ ಹಾಗೂ ಜಿ.ಪಂ ಸದಸ್ಯೆ ಕುಮುದಾ ಧರ್ಮಪ್ಪ ಉಪಸ್ಥಿತರಿದ್ದರು.