ಮಡಿಕೇರಿ, ಜ. 4: 18 ವರ್ಷ ಪೂರ್ಣಗೊಂಡಿರುವ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಜನವರಿ, 6, 7 ಮತ್ತು 8 ರಂದು ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶೇಕಡಾವಾರು ನೋಂದಣಿಗೆ ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರು ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರೊಂದಿಗೆ ಪ್ರತ್ಯೇಕವಾಗಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

18 ವರ್ಷ ಪೂರ್ಣಗೊಂಡವರು ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ಮತದಾರರ ಗುರುತಿನ ಚೀಟಿ ಪಡೆಯುವಂತಾಗಬೇಕು. ಚುನಾವಣಾ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿ ಇಲ್ಲ ಎಂಬ ದೂರುಗಳು ಬರಬಾರದು. ಆ ನಿಟ್ಟಿನಲ್ಲಿ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ 18 ವರ್ಷ ಪೂರ್ಣಗೊಂಡವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿ ಶೇಕಡಾವಾರು ಸಾಧನೆ ಮಾಡಲು ವಿವಿಧ ಕಾಲೇಜಿನ ಪ್ರಾಂಶುಪಾಲರಿಗೆ ಅವರು ಸೂಚಿಸಿದರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದು ನಿರಂತರ ಪ್ರಕ್ರಿಯೆಯಾಗಿದ್ದರೂ ಸಹ, ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮಗಳು ನಡೆಯಲಿದ್ದು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಎಲ್ಲರೂ ಶ್ರಮಿಸಬೇಕಿದೆ. 18 ವರ್ಷ ಪೂರ್ಣಗೊಂಡ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ಬಿಟ್ಟು ಹೋಗಿದ್ದಲ್ಲಿ ಸೇರಿಸುವುದು ಅಥವಾ ಸ್ಥಳ ಬದಲಿಸಿದ್ದಲ್ಲಿ ಸೇರ್ಪಡೆ ಮಾಡುವುದು, ಈ ಪ್ರಕ್ರಿಯೆಗಳು ನಡೆಯಲಿದೆ ಎಂದು ಅವರು ತಿಳಿಸಿದರು.

ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲ ಅಥವಾ ಬೇರೆ ಕಡೆ ಆಗಿದೆ ಎಂಬ ದೂರುಗಳು ಕೇಳಿ ಬರಬಾರದು. ಮತದಾರರ ಪಟ್ಟಿ ಸಂಬಂಧಿಸಿದಂತೆ ಯಾವುದಾದರೂ ಬದಲಾವಣೆ ಇದ್ದಲ್ಲಿ ಈಗಲೇ ಸರಿಪಡಿಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಪಕ್ಷದ ಪ್ರಮುಖರಾದ ತೆನ್ನಿರ ಮೈನಾ, ಜೆಡಿಎಸ್ ಪಕ್ಷದ ಪ್ರಮುಖರಾದ ಅಜಿತ್‍ಕುಮಾರ್ ಅವರು ಮತದಾರರ ಪಟ್ಟಿಗೆ 18 ವರ್ಷ ಪೂರ್ಣಗೊಂಡವರ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್‍ಕುಮಾರ್, ಚೆರಿಯನ್ ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ವಿಕಲಚೇತನರ ಅಧಿಕಾರಿ ಸಂಪತ್ ಕುಮಾರ್, ಚುನಾವಣಾ ತಹಶೀಲ್ದಾರ್ ಕುಸುಮ, ಪ್ರವೀಣ್ ಕುಮಾರ್, ಅನಿಲ್ ಕುಮಾರ್ ಇತರರು ಇದ್ದರು.

ಕೆಲವು ಮತಗಟ್ಟೆಗಳಲ್ಲಿ ಯಾವುದೇ ರದ್ದತಿ ಮತ್ತು ಸೇರ್ಪಡೆ ಇರುವ ಬಗ್ಗೆ, ಇ.ಪಿ.ಅನುಪಾತ ಹೆಚ್ಚಾಗಿರುವ ಬಗ್ಗೆ, ಕರಡು ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದೆ ಇರುವ ಮತದಾರರಿಂದ ಭಾವಚಿತ್ರವನ್ನು ಪಡೆಯುವ ಬಗ್ಗೆ, ಅಂಗವಿಕಲ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಬಗ್ಗೆ, ಮತದಾರರ ಮಾಹಿತಿ ಕೇಂದ್ರವನ್ನು ತೆರೆದಿರುವ ಬಗ್ಗೆ, ಕಾಲೇಜುಗಳಲ್ಲಿ ಜನವರಿ 6 ರಿಂದ 8 ರ ವರೆಗೆ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ, ಗಿರಿಜನ ಹಾಡಿಗಳಲ್ಲಿ ವಿಶೇಷ ಕ್ಯಾಂಪೆನ್ ಹಮ್ಮಿಕೊಳ್ಳುವ ಬಗ್ಗೆ, ಕರಡು ಮತದಾರರ ಪಟ್ಟಿಯಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳ ಮತ್ತು ಇತರೆ ವಿಐಪಿಗಳ ಹೆಸರು ಇರುವ ಬಗ್ಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು, ಬೂತ್ ಮಟ್ಟದ ಏಜೆಂಟರುಗಳು ನೀಡುವ ನಮೂನೆಗಳನ್ನು ಕಡ್ಡಾಯವಾಗಿ ಇ.ಆರ್.ಒ ಮತ್ತು ಎ.ಇ.ಆರ್.ಒಗಳು ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮವಹಿಸುವುದು. ನಮೂನೆಗಳನ್ನು ಡಾಟಾ ಎಂಟ್ರಿ ಮಾಡುವ ಬಗ್ಗೆ ಚರ್ಚಿಸಲಾಯಿತು.

ಮತದಾರರ ನೋಂದಣಿ ಹೇಗೆ: 1ನೇ ಜನವರಿ 2020 ಕ್ಕೆ ಅನ್ವಯವಾಗುವಂತೆ 18 ವರ್ಷಗಳನ್ನು ಪೂರೈಸಿದ ಯುವ ಹಾಗೂ ಭವಿಷ್ಯದ ಮತದಾರರು ನಮೂನೆ-6ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹತ್ತಿರದ ಮತಗಟ್ಟೆ ಅಧಿಕಾರಿಗಳ ಮೂಲಕ ಮತದಾರ ನೋಂದಣಿ ಅಧಿಕಾರಿಗಳಿಗೆ ಅಥವಾ ಸಹಾಯಕ ಮತದಾರ ನೋಂದಣಿ ಅಧಿಕಾರಿಯವರಿಗೆ ಸಲ್ಲಿಸುವಂತೆ ಹಾಗೂ ನೋಂದಾಯಿಸುವಂತೆ ತಮ್ಮ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಯುವ ಮತ್ತು ಭವಿಷ್ಯ ಮತದಾರರಿಗೆ ಸಾಕಷ್ಟು ಅರಿವು ಮೂಡಿಸಿ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು 2020 ಜನವರಿ 6,7 ಮತ್ತು 8ರಂದು ಹಮ್ಮಿಕೊಳ್ಳಲು ತಿಳಿಸಲಾಗಿದೆ.