ಮಡಿಕೇರಿ, ಜ. 4: ಒಂದು ವರ್ಷದ ಬಳಿಕ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಯು ಇಂದು ನಡೆಯುವದರೊಂದಿಗೆ, ಒಟ್ಟು 33 ಇಲಾಖೆಗಳ ಪ್ರಗತಿ ಪರಿಶೀಲನೆ ಬದಲಿಗೆ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಚೆಸ್ಕಾಂ, ಪಂಚಾಯತ್ ರಾಜ್, ಲೋಕೋಪಯೋಗಿ, ಕೃಷಿ, ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯಿತು. ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಜಿಲ್ಲೆಯ ಶಾಸಕರು, ಮೇಲ್ಮನೆ ಸದಸ್ಯರು, ಜಿ.ಪಂ. ಪ್ರಮುಖರು ಆಕ್ರೋಶಭರಿತ ನುಡಿಗಳೊಂದಿಗೆ ಮುಗಿಬಿದ್ದರು. ಸ್ವತಃ ಉಸ್ತುವಾರಿ ಸಚಿವ ವಿ. ಸೋಮಣ್ಣ ಮಾತಿನ ಚಾಟಿ ಬೀಸುವ ಮೂಲಕ ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಹಂತದ ಅಧಿಕಾರಿಗಳು ತಮ್ಮ ಹಳೆಯ ಚಾಳಿಗಳನ್ನು ಬಿಟ್ಟು 2020ನೇ ಹೊಸ ವರ್ಷದಲ್ಲಿ ಜನತೆಯ ಬೇಕು ಬೇಡಿಕೆಗಳನ್ನು ಈಡೇರಿಸುವಲ್ಲಿ ಒಳ್ಳೆಯ ಕೆಲಸ ಮಾಡುವುದರೊಂದಿಗೆ ಸರಕಾರದ ಯೋಜನೆಯಗಳನ್ನು ಪರಿಣಾಮಕಾರಿ ಯಾಗಿ ಅನುಷ್ಠಾನಕ್ಕೆ ಮುಂದಾಗುವಂತೆ ತಿಳಿ ಹೇಳಿದರು.

ವರ್ಷದ ಬಳಿಕ ಸಭೆ : ಕಳೆದ ವರ್ಷ 27.12.2018ರಂದು ಕೆಡಿಪಿ ಸಭೆ ನಡೆದಿದ್ದು, ಇಂದು ವರ್ಷದ ಬಳಿಕ ನಡೆಯುತ್ತಿರುವ ಸಭೆಯಲ್ಲಿ ಕೊಡಗಿನ ಜ್ವಲಂತ ಸಮಸ್ಯೆಗಳನ್ನು ಸರಿಪಡಿಸು ವಲ್ಲಿ ವಿಸ್ತøತ ಚರ್ಚೆಯಾಗಬೇಕೆಂದು ಸಭೆಯ ಆರಂಭದಲ್ಲಿ ಶಾಸಕ ಕೆ.ಜಿ. ಬೋಪಯ್ಯ ನೆನಪಿಸಿದರು. ಈ ಮಾತನ್ನು ಪುಷ್ಟೀಕರಿಸಿ ಮಾತು ಮುಂದುವರಿಸಿದ ಉಸ್ತುವಾರಿ ಸಚಿವ ವಿ.ಸೋಮಣ್ಣ ಕೊಡಗಿನ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಹಿತ ಎಲ್ಲ ಇಲಾಖೆಗಳು ಒಂದು ‘ಅಂಬ್ರಲ’ (ಕೊಡೆ)ದೊಳಗೆ ಪರಸ್ಪರ ಹೊಂದಾಣಿಕೆಯಲ್ಲಿ ಪಾರದರ್ಶಕವಾಗಿ ಕೆಲಸ ಮಾಡುವಂತೆ ಸಲಹೆಯಿತ್ತರು.

ಕೆ.ಜಿ.ಬಿ. ಆಕ್ರೋಶ : ಈ ವೇಳೆ ಜಿಲ್ಲೆಯಲ್ಲಿ ಸಂಭವಿಸಿರುವ 2 ವರ್ಷಗಳ ಪ್ರಾಕೃತಿಕ ವಿಕೋಪದಿಂದ ಜನತೆಯ ಸಂಕಷ್ಟ; ಗಿರಿಜನ ಹಾಡಿಗಳು ಹಾಗೂ ಅರಣ್ಯದಂತಿನ ನಿವಾಸಿಗಳೀಗೆ ವಿದ್ಯುತ್ ಕಲ್ಪಿಸಲು ಅರಣ್ಯ ಇಲಾಖೆಯ ಅಡಚಣೆ, ಜಲಪ್ರವಾಹದಿಂದ ಜಮೀನುಗಳಲ್ಲಿ ತುಂಬಿಕೊಂಡಿರುವ ಮರಳು ತೆರವಿಗೆ ರೈತರಿಗೆ ಕಿರುಕುಳ ಮುಂತಾದ ಸಮಸ್ಯೆಗಳನ್ನು ಬೊಟ್ಟು ಮಾಡಿದ ಶಾಸಕ ಕೆ.ಜಿ. ಬೋಪಯ್ಯ ಅಧಿಕಾರಿಗಳ ಕಿರುಕುಳದಿಂದ ಜನರು ತತ್ತರಿಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೊರಲಿನ ಧ್ವನಿ : ಆ ಬೆನ್ನಲ್ಲೇ ಇನ್ನೋರ್ವ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮೇಲ್ಮನೆ ಸದಸ್ಯರಾದ ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಧ್ವನಿಗೂಡಿಸಿ, 2018ರ ಮಳೆಯಿಂದ ರೈತರ ಜಮೀನಿನಲ್ಲಿ ತುಂಬಿರುವ ಮರಳು, ಹೊಳೆಗಳಲ್ಲಿ ಬಿದ್ದಿರುವ ಭಾರೀ ಗಾತ್ರದ ಮರಗಳು, ಸಂಬಂಧಿಸಿದ ಅಧಿಕಾರಿಗಳಿಂದ ತೆರವುಗೊಳಿಸದೆ ಜನತೆಗೆ ತೊಂದರೆ ಅನುಭವಿಸುವಂತಾಗಿದೆ ಎಂದು ಬೊಟ್ಟು ಮಾಡಿದರು.

ಅರಣ್ಯಾಧಿಕಾರಿಗಳು ಒಂದು ರೀತಿ ಉಪದ್ರ ಕೊಡುತ್ತಿದ್ದರೆ, ಗಣಿ ಇಲಾಖೆ ವಿಜ್ಞಾನಿಗಳು ಬಡವರು, ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ನಮ್ಮ ಸ್ವಂತ ಜಮೀನಿನ ಮರಳು ಸಂಗ್ರಹಿಸಿದರೆ ಅಡ್ಡಿಪಡಿಸುತ್ತಿದ್ದಾರೆಂದು ಹರಿಹಾಯ್ದರು. ಸರಕಾರಿ ಕಟ್ಟಡ, ರಸ್ತೆ ಕಾಮಗಾರಿಗೆ ಮರಳು ಸಾಗಾಟಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಬೋಪಯ್ಯ ಟೀಕಿಸಿದರೆ, ದೇವಾಲಯಕ್ಕೆ ‘ಪಿಕಪ್’ ವಾಹನದಲ್ಲಿ ಮರಳು ತರಲು ಬಿಟ್ಟಿಲ್ಲವೆಂದು ಅಪ್ಪಚ್ಚು ರಂಜನ್ ಕಿಡಿಕಾರಿದರು.

ಬಿಡುಗಡೆಗೆ ಸೂಚನೆ : ಈ ವೇಳೆ ಸಭೆಗೆ ಗೈರಾಗಿದ್ದ ಹಿರಿಯ ಭೂ ವಿಜ್ಞಾನಿ ರೇಷ್ಮಾ ವಿರುದ್ಧ ಜನಪ್ರತಿನಿದಿ üಗಳ ಆಕ್ರೋಶ ಅರಿತ ಸಚಿವರು ತಕ್ಷಣದಿಂದ ಈ ಅಧಿಕಾರಿ ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರಿಗೆ ತಾಕೀತು ಮಾಡಿದರು.

ಹೆದ್ದಾರಿಗೆ ಅಡ್ಡಿ : ಲೋಕೋಪಯೋಗಿ ಇಲಾಖೆಯಿಂದ ಕರ್ನಾಟಕ - ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾಕುಟ್ಟ ಹೆದ್ದಾರಿಯಲ್ಲಿ; ಮಳೆಗಾಲ ಭೂ ಕುಸಿತದಿಂದ ಕಡಿದುಕೊಂಡಿರುವ ಮಾರ್ಗದಲ್ಲಿ ಪರ್ಯಾಯ ವ್ಯವಸ್ಥೆಗೆ ಜಾಗ ಬಿಟ್ಟು ಕೊಡುತ್ತಿಲ್ಲ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿ ಬಂತು. ಈ ಬಗ್ಗೆ ನಿರ್ಣಯ ಕೈಗೊಂಡು, ಬದಲಿ ಜಾಗ ಬಳಸಿ ಕೊಳ್ಳಲು ಅರಣ್ಯ ಇಲಾಖೆ ಅಡ್ಡಿ ಮಾಡದಂತೆ ಸಚಿವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಅವರಿಗೆ ಸೂಚಿಸಿದರು. ಈ ನಿರ್ಣಯ ಕುರಿತು ತಾವು ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಗಮನ ಸೆಳೆಯುವುದಾಗಿಯೂ ಸಚಿವ ಸೋಮಣ್ಣ ಪ್ರಕಟಿಸಿದರು.

ಭತ್ತ ಖರೀದಿಸಲು ಕ್ರಮ : ಕೊಡಗಿನಲ್ಲಿ ರೈತರು ಬೆಳೆ ಕೊಯ್ಲು ಮಾಡಿ ಭತ್ತ ದಾಸ್ತಾನುಗೊಳಿಸಿದರೂ, ಆಹಾರ ಇಲಾಖೆಯಿಂದ ಬೆಂಬಲ ಬೆಲೆಗೆ ಖರೀದಿಸಲು ಕ್ರಮ ಕೈಗೊಂಡಿ ಲ್ಲವೆಂದು

(ಮೊದಲ ಪುಟದಿಂದ) ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ದೂರಿದರು. ತಕ್ಷಣ ಅಧಿಕಾರಿಗಳು ಕ್ರಮವಹಿಸಿ ಮುಂದಿನ 15 ದಿನಗಳಲ್ಲಿ ರೈತರಿಂದ ಭತ್ತ ಖರೀದಿಸಲು ವ್ಯವಸ್ಥೆ ಕೈಗೊಳ್ಳುವಂತೆ ನಿರ್ದೇಶಿಸಲಾಯಿತು.

ವಿದ್ಯುತ್ ಸೌಲಭ್ಯ : ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯಡಿ ಕೊಡಗಿನ ಆದಿವಾಸಿ ಹಾಡಿಗಳು, ಪರಿಶಿಷ್ಟ ಜಾತಿಯ ಕಾಲೋನಿಗಳು, ಅರಣ್ಯದಂಚಿನ ನಿವಾಸಿಗಳಿಗೆ ವಿದ್ಯುತ್ ಕಲ್ಪಿಸಲು ಮಾನವೀಯ ನೆಲೆಯಲ್ಲಿ ಅವಕಾಶ ನೀಡಬೇಕೆಂದು ಅರಣ್ಯಾಧಿಕಾರಿಗಳಿಗೆ ಸಚಿವ ಸೋಮಣ್ಣ ತಿಳಿ ಹೇಳಿದರು.

ಮಾರ್ಚ್ ಅಂತ್ಯಕ್ಕೆ ಮನೆ : ಕಳೆದೆರದು ವರ್ಷಗಳ ಮುಂಗಾರುವಿನಲ್ಲಿ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಸೋಮಣ್ಣ, ಬರುವ ಮಾರ್ಚ್ ಅಂತ್ಯದೊಳಗೆ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸುವಂತೆ ರಾಜೀವ್‍ಗಾಂಧಿ ಗೃಹ ನಿರ್ಮಾಣ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಇತ್ಯರ್ಥ : ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥಪಡಿಸಿ ಆದಿವಾಸಿಗಳಿಗೆ ಅರಣ್ಯ ಹಕ್ಕು ಪತ್ರ ನೀಡುವಂತೆ ಸಚಿವ ವಿ.ಸೋಮಣ್ಣ ಸೂಚಿಸಿದರು.

ಈ ಕುರಿತು ವಿಷಯ ಪ್ರಸ್ತಾಪಿಸಿದ ಶಾಸಕ ಕೆ.ಜಿ.ಬೋಪಯ್ಯ ಮೂಲ ನಿವಾಸಿಗಳಿಗೆ ಅರಣ್ಯ ಹಕ್ಕುಪತ್ರ ನೀಡದೆ ತುಂಬಾ ತೊಂದರೆಯಾಗಿದೆ. ಮಾಲ್ದಾರೆ ಗಿರಿಜನ ಹಾಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಮಾಕುಟ್ಟ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇದ್ದು, ಇವುಗಳೆಲ್ಲವನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕಿದೆ ಎಂದು ಗಮನ ಸೆಳೆದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ಬಜೆಗುಂಡಿ ಸೇರಿದಂತೆ ಹಲವು ಹಾಡಿಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಹೇಳಿದರು.

ಅರ್ಜಿಗಳು ಬಾಕಿ : ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅರಣ್ಯ ಹಕ್ಕು ಕಾಯ್ದೆಯಡಿ 3,662 ಅರ್ಜಿಗಳು ಸಲ್ಲಿಕೆಯಾಗಿದ್ದು, 1876 ಅರ್ಜಿಗಳು ಅರಣ್ಯ ಇಲಾಖೆಯಿಂದ ತಿರಸ್ಕøತವಾಗಿವೆ. ನಾಗರಹೊಳೆ ಭಾಗದಲ್ಲಿ 18 ಹಾಡಿಗಳಿದ್ದು, ಇವುಗಳಿಗೆ ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಮಾಹಿತಿ ನೀಡಿದರು.

‘ಹಲವು ಇಲಾಖಾ ಅಧಿಕಾರಿಗಳು ಹಾಗೂ ಆರ್‍ಎಫ್‍ಒ ಅವರ ಉಪಸ್ಥಿತಿಯಲ್ಲಿ ಅರಣ್ಯ ಗ್ರಾಮಸಭೆ ನಡೆಸಿ ಅರಣ್ಯ ಹಕ್ಕು ಪತ್ರ ನೀಡಲು ಕ್ರಮವಹಿಸಬೇಕು. ಆದರೆ ಈ ಕೆಲಸ ಅಧಿಕಾರಿಗಳಿಂದ ಆಗುತ್ತಿಲ್ಲ. ಸಾಮಾಜಿಕ ನ್ಯಾಯವೆಂದರೆ ಇದೇನಾ? ಎಂದು ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.’

ಹಾಗೆಯೇ 1978ಕ್ಕೂ ಮುಂಚೆ ಅರಣ್ಯ ಪ್ರದೇಶದಲ್ಲಿ ಯಾರು ವಾಸಮಾಡುತ್ತಿದ್ದರು. ಅವರಿಗೆ ಹಕ್ಕುಪತ್ರ ನೀಡಬೇಕು. ಇನ್ನೂ 300 ರಿಂದ 400 ಮಂದಿಗೆ 3 ಎಕರೆವರೆಗೆ ಹಕ್ಕು ಪತ್ರ ನೀಡಬೇಕಿದೆ. ಆ ನಿಟ್ಟಿನಲ್ಲಿ ಸಂಪಾಜೆ, ಚೆಂಬು ಭಾಗದಲ್ಲಿ ಈಗಾಗಲೇ ಹಕ್ಕುಪತ್ರ ನೀಡಿದ್ದಾರೆ. ಆದರೆ ಈಗ ಆರ್‍ಟಿಸಿ ಇದೆಯೇ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಟೀಕಿಸಿದರು.

ಇದಕ್ಕೆ ಧ್ವನಿಗೂಡಿಸಿದ ಅಪ್ಪಚ್ಚುರಂಜನ್ ಜಿಲ್ಲೆಯಲ್ಲಿ ಇನ್ನೂ 3 ಸಾವಿರ ಮಂದಿಗೆ ಅರಣ್ಯ ಹಕ್ಕುಪತ್ರ ನೀಡಬೇಕಿದೆ ಎಂದು ಗಮನ ಸೆಳೆದರು.

ನಾಗರಹೊಳೆ ವ್ಯಾಪ್ತಿಗೆ : ದೇವಮಚ್ಚಿ ಪ್ರದೇಶವನ್ನು ವನ್ಯಜೀವಿ ಪ್ರದೇಶವೆಂದು ನಾಗರಹೊಳೆ ವ್ಯಾಪ್ತಿಗೆ ಸೇರಿಸಲಾಗಿದೆ. ಮಾಲ್ದಾರೆ, ಚೆನ್ನಂಗಿ, ತಿತಿಮತಿ ಭಾಗದಲ್ಲಿ ವಾಸಿಸುವ ಜನರಿಗೆ ಕಾಟ ಕೊಡುತ್ತಿದ್ದಾರೆ. ಇವರ ಕಿರುಕುಳದಿಂದಾಗಿ ಆ ಭಾಗದಲ್ಲಿನ ಆದಿವಾಸಿಗಳು ಮತಾಂತರವಾಗುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ದೂರಿದರು. ಸಚಿವ ಸೋಮಣ್ಣ ಮಾತನಾಡಿ ಅಧಿಕಾರಿಗಳು ಜನಸಾಮಾನ್ಯರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು. ಅದನ್ನು ಬಿಟ್ಟು ತೊಂದರೆ ನೀಡುವುದು ಸರಿಯಲ್ಲ ಎಂದು ಮಾತಿನ ಚಾಟಿ ಬೀಸಿದರು.

ರೂ. 16 ಕೋಟಿ ಬಿಡುಗಡೆ: ಸೌಭಾಗ್ಯ ಮತ್ತು ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಆ ನಿಟ್ಟಿನಲ್ಲಿ ವರ್ಷದ ಹಿಂದೆಯೇ ಕೇಂದ್ರ ಸರ್ಕಾರದಿಂದ ರೂ. 16 ಕೋಟಿ ಬಿಡುಗಡೆಯಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಟೀಕೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಧಿಕಾರಿಗಳು ವಾಸ್ತವಾಂಶ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಲೋಕೋಪಯೋಗಿ, ಅರಣ್ಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ ನಿಗಮಗಳ ವ್ಯಾಪ್ತಿಯ ಗಂಗಾ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ 140 ಬೋರ್‍ವೆಲ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ ಎಂದು ಮಾಹಿತಿ ನೀಡಿದರು. ಮಾನವೀಯ ನೆಲೆಯಲ್ಲಿ ಅನುವು ಮಾಡಿಕೊಡುವಂತೆ ಅರಣ್ಯ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಕುಟುಂಬಗಳಿಗೆ ಅರಣ್ಯ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ತಹಶೀಲ್ದಾರರು, ಇಒಗಳು ಒಟ್ಟುಗೂಡಿ ಬಾಕಿ ಇರುವ ಅರಣ್ಯ ಹಕ್ಕು ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅವರು ಸೂಚಿಸಿದರು.

ಪಡಿತರ ಸಮಸ್ಯೆ : ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಕುಗ್ರಾಮಗಳಾದ ಕೂತಿ, ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಬೆಟ್ಟದಳ್ಳಿ ಮತ್ತಿತರ ಕಡೆಗಳಿಗೆ ಪಡಿತರ ವ್ಯವಸ್ಥೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಹಳೇ ಪದ್ಧತಿಯಲ್ಲಿ ಆಹಾರ ಪೂರೈಕೆಯಾಗಬೇಕು ಎಂದು ಒತ್ತಾಯಿಸಿದರು.

ಸಚಿವ ವಿ.ಸೋಮಣ್ಣ ಸ್ಪಂದಿಸಿ ಜಿಲ್ಲೆಯ ಶಾಸಕರಿಗೆ ಜನಸಾಮಾನ್ಯರ ಬಗ್ಗೆ ಹೆಚ್ಚಿನ ಕಾಳಜಿ ಇದ್ದು, ಶಾಸಕರು ಹೇಳಿದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಬಡವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಕೈಬರಹದ ಮೂಲಕ ಆಹಾರ ಪೂರೈಸಿ ಎಂದು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ದಕ್ಷಿಣ ಕೊಡಗು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹುಲಿ ದಾಳಿಯಿಂದಾಗಿ ಮಾನವ ಪ್ರಾಣ ಹಾನಿ, ಜಾನುವಾರು ಪ್ರಾಣ ಹಾನಿ ಸಂಭವಿಸುತ್ತಿದೆ. ಹಾಗೆಯೇ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಆದ್ದರಿಂದ ಅಗತ್ಯ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ಮರಗಳು ಉರುಳಿದ್ದು, ರಾಷ್ಟ್ರೀಯ, ರಾಜ್ಯ ಹೆದ್ದಾರಿ ಮತ್ತಿತರ ಕಡೆಗಳಲ್ಲಿ ಮರಗಳನ್ನು ತೆರವುಗೊಳಿಸುವಂತೆ ಶಾಸಕರುಗಳಾದ ಬೋಪಯ್ಯ, ಅಪ್ಪಚ್ಚುರಂಜನ್, ವೀಣಾಅಚ್ಚಯ್ಯ ಗಮನ ಸೆಳೆದರು.

ಸರ್ಕಾರ ಪ್ರಕೃತಿ ವಿಕೋಪ ಕಾಮಗಾರಿಗಳಿಗಾಗಿ ರೂ. 436 ಕೋಟಿ ಮೊತ್ತದ ಹಣ ನೀಡಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಈ ದಿಸೆಯಲ್ಲಿ ಕ್ರಿಯಯೋಜನೆ ರೂಪಿಸಿ ಕೂಡಲೇ ಸರಕಾರಕ್ಕೆ ಕಳುಹಿಸಿ ಎಂದು ಸಚಿವರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಸೂಚಿಸಿದರು.

ಮಾನವೀಯತೆ ಇರಲಿ : ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ ಕಾನೂನಿನ ಜೊತೆಗೆ ಮಾನವೀಯತೆಯು ಸಹ ಅಧಿಕಾರಿಗಳಿಗೆ ಇರಬೇಕು. ಜನರ ನೋವನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಕುಶಾಲನಗರದಲ್ಲಿ ಒಳಚರಂಡಿ ಸಮಸ್ಯೆ ಬಗೆಹರಿಸಬೇಕು ಮತ್ತು ಕನ್ನಡ ಭವನ ಉದ್ಘಾಟನೆಯೊಂದಿಗೆ ಚಟುವಟಿಕೆಗೆ ಅನುವು ಮಾಡಿ ಕೊಡಿ ಎಂದು ಒತ್ತಾಯಿಸಿದರು.

ಪ್ರಕೃತಿ ವಿಕೋಪದಡಿ ಜಂಬೂರು, ಮದೆಗಳಲ್ಲಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಸಂತ್ರಸ್ತ ಕುಟುಂಬಗಳಿಗೆ ಹಸ್ತಾಂತರಿಸಬೇಕು. ಆ ನಿಟ್ಟಿನಲ್ಲಿ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ತಾ. 22 ರಂದು ಮುಂದುವರಿದ ತ್ರೈಮಾಸಿಕ ಕೆ.ಡಿ.ಪಿ.ಸಭೆಯನ್ನು ನಡೆಸಲಾಗುವುದು ಎಂದು ಪ್ರಕಟಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸಿ.ಕೆ. ಬೋಪಣ್ಣ, ಕಿರಣ್ ಕಾರ್ಯಪ್ಪ, ಸರೋಜಮ್ಮ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸಿ.ವಿ. ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.