ಮಡಿಕೇರಿ, ಜ. 4: ಕೊಡಗು ಜಿಲ್ಲೆಯಲ್ಲಿಯೇ ಪ್ರಾಥಮಿಕ - ಪ್ರೌಢ ಹಂತದ ಶಿಕ್ಷಣವನ್ನು ಪೂರೈಸಿ ಯು.ಪಿ.ಎಸ್.ಸಿ.ಯಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸವಾಲಾಗಿ ಎದುರಿಸಿ ದೇಶದಲ್ಲಿ 247ನೇ ರ್ಯಾಂಗ್‍ಗಳಿಸುವ ಮೂಲಕ ಇಂಡಿಯನ್ ರೆವಿನ್ಯು ಸರ್ವೀಸ್ (ಐ.ಆರ್.ಎಸ್.)ಗೆ ಸೇರ್ಪಡೆಗೊಂಡಿದ್ದ ಕೊಡಗಿನ ತರುಣರೊಬ್ಬರಲ್ಲಾಗಿರುವ ಗೋಣಿಕೊಪ್ಪಲುವಿನ ಡಾ. ಕೊಟ್ಟಂಗಡ ಪೆಮ್ಮಯ್ಯ ಇದೀಗ ಗುಜರಾತ್ ರಾಜ್ಯದ ಸೂರತ್ ಆದಾಯ ತೆರಿಗೆ ಇಲಾಖೆಯ ಡೆಪ್ಯುಡಿ ಕಮೀಷನರ್ (ಉಪ ಆಯುಕ್ತ)ರಾಗಿ ಬಡ್ತಿ ಹೊಂದಿದ್ದಾರೆ.ತಮ್ಮ 29ನೇಯ ವಯಸ್ಸಿಗೆ ಇವರು ಈ ಸ್ಥಾನವನ್ನು ಏರಿದ್ದಾರೆ. 2015ರ ಸಿವಿಲ್ ಸರ್ವೀಸ್ ಪರೀಕ್ಷೆ (ಯು.ಪಿ.ಎಸ್.ಸಿ.)ಯಲ್ಲಿ 247ನೇ ರ್ಯಾಂಕ್ ಗಳಿಸಿದ ಪೆಮ್ಮಯ್ಯ ಅವರು 2016ರಲ್ಲಿ ತಮ್ಮ ರ್ಯಾಂಕಿಂಗ್‍ನಂತೆ ಐ.ಆರ್.ಎಸ್.ಗೆ ಆಯ್ಕೆಯಾದರು. ತರಬೇತಿ ಬಳಿಕ ಅವರು ಆರಂಭದಲ್ಲಿ ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ನಿಯೋಜಿತರಾಗಿದ್ದು, ಗುಜರಾತ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

(ಮೊದಲ ಪುಟದಿಂದ) ಇದೀಗ ಇವರು ಇದೇ ಇಲಾಖೆಯ ಡೆಪ್ಯುಟಿ ಕಮೀಷನರ್ ಆಗಿ ಬಡ್ತಿ ಪಡೆದಿದ್ದಾರೆ. ಇನ್ನೂ ಕೆಲವು ವರ್ಷ ಗುಜರಾತ್ ರಾಜ್ಯದಲ್ಲೇ ಇವರು ಬಹುತೇಕ ಇದೇ ಇಲಾಖೆಯಲ್ಲಿ ತನಿಖಾ ವಿಭಾಗದ ಅಧಿಕಾರಿಯಾಗುವ ಸಾಧ್ಯತೆ ಇದೆ.

ಆರಂಭದಲ್ಲಿ ವೈದ್ಯರು : ಕೊಟ್ಟಂಗಡ ಪೆಮ್ಮಯ್ಯ ಅವರು ಆರಂಭದಲ್ಲಿ ವೈದ್ಯಕೀಯದಲ್ಲಿ ಪದವಿ ಪಡೆದು ಗೋಣಿಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ವರ್ಷ ವೈದ್ಯರಾಗಿ ಕೆÀಲಸ ಮಾಡಿದ್ದರು. ವೈದ್ಯ ವೃತ್ತಿ ನಿರ್ವಹಿಸುತ್ತಲೇ ಯುಪಿಎಸ್‍ಸಿ ಪರೀಕ್ಷೆಯನ್ನು ಎದುರಿಸಿ ಸಾಧನೆ ಮಾಡಿದ್ದು ವಿಶೇಷವಾಗಿದೆ.

ಆಸಕ್ತಿ ಬದಲಾಗಬೇಕು : ಕೊಡಗಿನ ವಿದ್ಯಾರ್ಥಿಗಳು ಬಹುತೇಕ ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್ ಶಿಕ್ಷಣದತ್ತ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದು, ಈ ಆಸಕ್ತಿ ಬದಲಾಗಬೇಕು, ಸ್ಪರ್ಧಾತ್ಮಕ ಪರೀಕ್ಷೆಯಂತಹ ಆಡಳಿತಾತ್ಮಕ ಸೇವೆಯತ್ತ ಗಮನಹರಿಸಬೇಕು. ಪೋಷಕರೂ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕೆಂದು ಡಾ. ಪೆಮ್ಮಯ್ಯ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು.

ಉತ್ತರ ಭಾರತದಲ್ಲಿ ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಯತ್ತ ಯುವ ಜನಾಂಗ ಆಸಕ್ತಿ ತೋರುತ್ತಿದೆ. ಇದೇ ಮನೋಭಾವ ಕೊಡಗಿನವರಲ್ಲೂ ಬರಬೇಕೆಂದು ಅವರು ಹೇಳಿದರು.

ಇಂಡಿಯನ್ ರೆವಿನ್ಯೂ ಸರ್ವೀಸ್ ಕೂಡ ದೇಶದ ಒಂದು ಸೇವೆಯಾಗಿದೆ. ಭಾರತ ಸಂವಿಧಾನದ ಮೇಲೆಯೇ ಪ್ರಮಾಣವಚನ ಸ್ವೀಕರಿಸಿ ಈ ಜವಾಬ್ದಾರಿಯುತ ಹುದ್ದೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ಉತ್ತಮ ರೀತಿಯ ಕರ್ತವ್ಯ ನಿರ್ವಹಣೆ ತಮ್ಮ ಅಭಿಲಾಷೆಯಾಗಿದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಪ್ರಾವಿಣ್ಯತೆ ಮೈಗೂಡಿಸಿಕೊಂಡು ಜವಾಬ್ದಾರಿ ಯುತ ಸ್ಥಾನಕ್ಕೆ ಬರುವಂತಾಗಬೇಕು ಎಂದು ಅವರು ಸಲಹೆಯಿತ್ತರು.

ಪೆಮ್ಮಯ್ಯ ತಮ್ಮ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಸೆಂಟ್ ಮೇರೀಸ್, ಕುಟ್ಟ ಗೋಣಿಕೊಪ್ಪಲು ಲಯನ್ಸ್ ಹಾಗೂ ವೀರಾಜಪೇಟೆಯ ಸೆÀಂಟ್ ಆ್ಯನ್ಸ್‍ನಲ್ಲಿ ಪೂರೈಸಿದ್ದಾರೆ. ಇವರು ಮೂಲತಃ ಕುಟ್ಟದ ಇದೀಗ ಗೋಣಿಕೊಪ್ಪದಲ್ಲಿ ನೆಲೆಸಿರುವ ಕೊಟ್ಟಂಗಡ ದಿ. ದೇವಯ್ಯ ಹಾಗೂ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಯಾಗಿರುವ ವಿಜು ದೇವಯ್ಯ ದಂಪತಿಯ ಪುತ್ರ. ಇವರ ಸಹೋದರಿ ಮಾಳೇಟಿರ ಶಿಲ್ಪಿಕಾ ಅವರು ಕೂಡ ವೈದ್ಯರಾಗಿದ್ದು, ಪ್ರಸ್ತುತ ಅಮೇರಿಕಾದಲ್ಲಿದ್ದಾರೆ.