ಮಡಿಕೇರಿ, ಜ. 4: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಂಯುಕ್ತ ಆಶ್ರಯದಲ್ಲಿ ದೇಶದ ಅಪ್ರತಿಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆಯು ನಗರದ ಸಂತ ಮೈಕಲರ ಶಾಲೆಯಲ್ಲಿ ನಡೆಯಿತು.

ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎನ್. ಗಾಯತಿ ್ರ (ಮಡಿಕೇರಿ), ಶ್ರೀಶೈಲ ಬೀಳಗಿ (ವೀರಾಜಪೇಟೆ), ಹೆಚ್.ಕೆ. ಪಾಂಡು (ಸೋಮವಾರಪೇಟೆ), ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಮಲ್ಲೇಸ್ವಾಮಿ ಅವರು ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಚಿತ್ರಕಲಾವಿದ ಬಿ.ಆರ್. ಸತೀಶ್ ಅವರು ಸಾವಿತ್ರಿಬಾಯಿ ಫುಲೆ ಅವರ ಚಿತ್ರ ರಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, 1831 ಜನವರಿ 3 ರಂದು ಹಿಂದುಳಿದ ಸಮುದಾಯದಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ ಅವರು, ದೇಶದ ಇತಿಹಾಸದಲ್ಲಿ ಅತ್ಯಂತ ಮಹನೀಯರು. ಸ್ತ್ರೀ ಸ್ವಾತಂತ್ರ್ಯ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೋರಾಟ ನಡೆಸಿದರು. ಒಂಭತ್ತನೇ ವಯಸ್ಸಿನಲ್ಲಿ ಬಾಲ್ಯವಿವಾಹವಾಗಿತ್ತು. ಪತಿ ಜ್ಯೋತಿರಾವ್ ಫುಲೆ ಅವರು ವಿದ್ಯಾವಂತರಾಗಿದ್ದ ಕಾರಣ, ತಮ್ಮ ಪತ್ನಿಗೂ ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾದರು. ಸಮಾಜದಲ್ಲಿ ಸಾಕಷ್ಟು ಟೀಕೆ-ಟಿಪ್ಪಣಿಗಳು ಬಂದರೂ ಸಹ ಯಾವುದಕ್ಕೂ ಸಾವಿತ್ರಿಬಾಯಿ ಫುಲೆ ಅವರು ಎದೆಗುಂದದೆ ಹೋರಾಟ ಮುಂದುವರೆಸಿದರು ಎಂದು ತಿಳಿಸಿದರು.

ದೇಶದ ಮೊದಲ ಮಹಿಳಾ ಶಿಕ್ಷಕಿಯಾಗುವುದರೊಂದಿಗೆ ಶಿಕ್ಷಕ ವೃತ್ತಿಗೆ ಹೆಚ್ಚಿನ ಘನತೆಯನ್ನು ತಂದುಕೊಟ್ಟರು. ಸ್ವಾತಂತ್ರ್ಯ ಪೂರ್ವದಲ್ಲೇ ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಅವರ ಸಾಧನೆ ಇಂದಿನ ಯುವ ಶಿಕ್ಷಕ ವರ್ಗಕ್ಕೆ ಸ್ಫೂರ್ತಿದಾಯಕ ಎಂದು ನುಡಿದರು.

ವೀರಾಜಪೇಟೆ ತಾಲೂಕಿನ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕ ಕ್ಲಿಪರ್ಡ್ ಡಿ ಮೆಲ್ಲೋ ಅವರು ‘ಕಲಿಸು ಗುರುವೇ ಕಲಿಸು’ ರಾಗ ಸಂಯೋಜನೆ ನುಡಿಸಿದರು.

ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಕುಂತಿ ಬೋಪಯ್ಯ, ಪ್ರೌಢಶಾಲಾ ಶಿಕ್ಷಕರು ಇತರರು ಹಾಜರಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಎಸ್.ಟಿ. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು. ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಪ್ರಾರ್ಥಿಸಿದರು.