ಕೂಡಿಗೆ, ಜ. 4: ಕೇಂದ್ರದ ರಾಷ್ಟ್ರಮಟ್ಟದ ಗ್ರಾಮ ಪಂಚಾಯಿತಿ ಮೇಲ್ವಿಚಾರಣ ತಂಡ ಸೋಮವಾರಪೇಟೆ ತಾಲೂಕಿನ 4 ಗ್ರಾ.ಪಂ.ಗಳಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಹಿತಿಯನ್ನು ಪಡೆದರು.

ಈ ತಂಡವು ಸರಕಾರದ ಮಿಷನ್ ಯೋಜನೆಯ, ಮಿಷನ್ ಅಂತ್ಯದ್ಯಾಯ ಯೋಜನೆಯ ಮಾಹಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಮಾಹಿತಿ ಅಲ್ಲದೆ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಬೇಕಾದ ಎಲ್ಲಾ ವಿಷಯಗಳು ಸವಿಸ್ತಾರವಾಗಿ ಸಭೆಯಲ್ಲಿ ಹಾಜರಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತರು, ವಿವಿಧ ಇಲಾಖೆಯವರು ಮಾಹಿತಿ ನೀಡಿದರು.

ಕೇಂದ್ರದ ತಂಡವು ನಮ್ಮ ಗ್ರಾಮ ನಮ್ಮ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಮುಂದೆ ನಡೆಯಬೇಕಾಗಿರುವ ಕಾಮಗಾರಿಯ ಬಗ್ಗೆ ಸಮಗ್ರವಾಗಿ ವಿಷಯಗಳನ್ನು ಸಂಗ್ರಹಿಸಿದರು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆಗಳ ಬಗ್ಗೆ ಮತ್ತು ಗ್ರಾಮ ಮಟ್ಟದಲ್ಲಿ ಆಗಬೇಕಾಗುವ ಕಾಮಗಾರಿಗಳ ವಿವಿಧ ಯೋಜನೆಯ ಮಾಹಿತಿಯನ್ನು ಕೇಂದ್ರದ ತಂಡವು ಗ್ರಾಮ ಪಂಚಾಯಿತಿಗಳಿಂದ ಪಡೆದುಕೊಂಡಿತು. ತಂಡದಲ್ಲಿ ಡಾ. ಸುಬ್ಬರಾವ್, ಡಾ. ಪೀಜಯ್ಯ ಪ್ರಮುಖರಾಗಿದ್ದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಂಯೋಜಕ ಉಮೇಶ್, ಜಯಣ್ಣ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಗ್ರಾಮ ಪಂಚಾಯಿತಿ ಸದಸ್ಯರು, ಈ ವ್ಯಾಪ್ತಿಯ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತರು, ಕಂದಾಯ ಇಲಾಖೆಯ ಅಧಿಕಾರಿ, ತೋಟಗಾರಿಕೆ, ಜಿಲ್ಲಾ ಪಂಚಾಯಿತಿ ಇಂಜಿನಿಯರ್, ಹೋಬಳಿ ವ್ಯಾಪ್ತಿಯ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ತಂಡವು 7ನೇ ಹೊಸಕೋಟೆ, ಕಂಬಿಬಾಣೆ, ನಂಜರಾಯಪಟ್ಟಣ, ಕೂಡುಮಂಗಳೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿತು.