ಮಡಿಕೇರಿ, ಜ. 4: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಯಿತು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಹಾಗೂ ಎನ್‍ಆರ್.ಸಿ ದೇಶದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಮಾರಕವಾಗಿವೆ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಚಂದ್ರಮೌಳಿ , ಸಂವಿಧಾನ ನಮ್ಮ ಉಸಿರು, ನಮ್ಮ ಹಕ್ಕು, ಸಂವಿಧಾನ ಯಾವೊಂದು ಜಾತಿಗೆ ಸೀಮಿತ ವಾದುದಲ್ಲ. ಸಂವಿಧಾನವನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಸಂವಿಧಾನದಲ್ಲಿ ನಮಗೆ ನೀಡಿದ ಹಕ್ಕುಗಳನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಆದರೆ ಬಿಜೆಪಿ ಹಿಂದೂ,

(ಮೊದಲ ಪುಟದಿಂದ) ಮುಸ್ಲಿಂ ಎನ್ನುತ್ತಾ ಧರ್ಮದ ವಿಚಾರ ಮುಂದಿಟ್ಟು ಕೊಂಡು ರಾಷ್ಟ್ರ ವಿಭಜನೆಗೆ ಹೊರಟಿದೆ.

ಯಾವ ಯುವಕರು ಮೋದಿಯ ವರನ್ನು ಅಧಿಕಾರಕ್ಕೆ ತರಬೇಕೆಂದು ಬೀದಿಗಿಳಿದಿದ್ದರೊ ಇಂದು ಅದೇ ಯುವಕರು ಮೋದಿಯವರ ಅಧಿಕಾರವನ್ನು ಅಂತ್ಯಗಾಣಿಸಬೇಕೆಂದು ತೀರ್ಮಾನಿಸಿದ್ದಾರೆ ಎಂದು ಚಂದ್ರಮೌಳಿ ಹೇಳಿದರು. ಭಾರತವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಮೋದಿಯವರು ಅಧಿಕಾರಕ್ಕೆ ಬಂದಿರು ವುದೇ ದೇಶವನ್ನು ವಿಭಜಿಸಲು ಎಂದು ಎಲ್ಲರಿಗೂ ಈಗಾಗಲೇ ಮನವರಿಕೆ ಯಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಚಂದ್ರಮೌಳಿ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಅಮಾನವೀಯ, ಅಮಾನುಷ ಕಾಯ್ದೆಯನ್ನು ಈ ದೇಶದಲ್ಲಿ ಜಾರಿಗೆ ತರುತ್ತಿದೆ. ಸಂವಿಧಾನ ಆಶಯವನ್ನು ಬದಿಗೊತ್ತಿ, ರಾಜಕೀಯ ದುರುದ್ದೇಶ ದಿಂದ, ತಲಾ ತಲಾಂತರಗಳಿಂದ ಭಾರತದಲ್ಲಿ ಜೀವಿಸುತ್ತಿರುವ ಮುಸ್ಲಿಂ ಸಮುದಾಯವರಿಗೆ ಈ ಕಾಯ್ದೆಯಿಂದ ಕಿರುಕುಳ ನೀಡುತ್ತಿದೆ. ದೇಶದಲ್ಲಿನ ಭಾರತೀಯರು ಶಾಂತಿ, ಸಾಮರಸ್ಯ ದಿಂದ ಬಾಳಬೇಕೆಂಬ ಸಂವಿಧಾನದ ಆಶಯವನ್ನು ತಿಳಿಯದ ಬಿಜೆಪಿ ಹಿಂದುತ್ವದಡಿಯಲ್ಲಿ ಆಳ್ವಿಕೆ ಮಾಡಲು ಮುಂದಾಗಿದೆ. ನಮ್ಮ ಈ ಹೋರಾಟ ಆರಂಭವಷ್ಟೇ. ಈ ಕಾಯ್ದೆಯನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಖಾಸಿಂ ಮಾತನಾಡಿ, ಈ ದೇಶದಲ್ಲಿ ಎಲ್ಲಾ ಸಮುದಾಯ ದವರು ಜೀವನ ನಡೆಸುತ್ತಿದ್ದಾರೆ.ಒಂದು ಸಮುದಾಯವನ್ನು ಹೊರಗಿಟ್ಟು ಯಾರಿಗೂ ಅಧಿಕಾರ ನಡೆಸಲು ಸಾಧ್ಯವಿಲ್ಲ.

ಮುಸ್ಲಿಂರ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಅವರು ಅವಮಾನಕರ ಹೇಳಿಕೆ ನೀಡಿದ್ದು, ಇವರ ವಿರುದ್ಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು. ಅಮಾಯಕರನ್ನು ಬಂಧಿಸುವ ಬದಲು, ಇಂತಹ ಪ್ರಚೋದನಕಾರಿ ಹೇಳಿಕೆ ನೀಡಿದವರನ್ನು ಪೊಲೀಸರು ಜೈಲಿಗೆ ಹಾಕಬೇಕು ಎಂದು ಖಾಸಿಂ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಟಿ.ಎ ಶಾಹಿದ್ ತೆಕ್ಕಿಲ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ ರಮೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲೋಕೇಶ್, ಜಿಲ್ಲಾ ಪಂಚಾಯತ್ ಸದಸ್ಯೆ ಕುಮುದಾ ಧರ್ಮಪ್ಪ, ಸುನಿತಾ ಮಂಜುನಾಥ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಟಾಟು ಮೊಣಪ್ಪ, ರಮಾನಾಥ್ ಬೇಕಲ್, ವಿ.ಪಿ. ಸುರೇಶ್, ಹನೀಫ್ ಸಂಪಾಜೆ, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ನಗರಸಭಾ ಮಾಜಿ ಸದಸ್ಯರುಗಳಾದ ಚುಮ್ಮಿ ದೇವಯ್ಯ, ನಂದಕುಮಾರ್, ಉದಯಕುಮಾರ್, ತಜಸ್ಸುಂ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮತ್ತಿತರರು ಭಾಗವಹಿಸಿದ್ದರು.