ಕುಡುಮಲೆಯ ಕೊಡವ ಕುಲ ಪಡೆಯಿಲರ ವಂಶ
ಮನೆ-ಮನೆಗೂ ಕೋವಿಯದು ಕ್ಷತ್ರಿಯರ ಅಂಶ
ಕೊಡವಗಿಲ್ಲವೊ ಬೇರೆ ವಿಧ-ವಿಧದ ಗೋತ್ರ
ಪಡೆಯಿಲರ ಸಂಸ್ಕøತಿಯ ಪರಂಪರೆಯು ಮಾತ್ರ
ಕೊಡವರನುದಿನ ದೇಶ ಕಾಯುತಿಹ ವೀರ ಕುಲ
ಕೋವಿ ಪೂಜಿದರವಗೆ ಯಾಗ ಯಜ್ಞ ಫಲ
ಗುಂಡು ಸದ್ದನು ಕೇಳಿ ಕೊಡವ ಪಡೆವನು ಜನ್ಮ
ಕೋವಿ ಪೂಜುವುದವನ ಜಾತಿಕುಲ ಧರ್ಮ
ಕೋವಿ ಕತ್ತಿಗೆ ತೋರುವನು ಕೊಡವ ಭಯ ಭಕ್ತಿ
ಕೋವಿ ಕತ್ತಿಯಲಡಗಿಹುದು ಆಧ್ಯಾತ್ಮ ಶಕ್ತಿ
ಕತ್ತಿ ಕೋವಿಯ ಪೂಜೆಯಲವಗೆ ಮುಕ್ತಿ
ಸಾರಿ ಹೇಳುವೆ ಕೇಳಿ ಇದೇ ಕೊಡವ ಸಂಸ್ಕøತಿ
ಸಂಸ್ಕøತಿಯ ಸಾರುವನು ಅರಿತು ಕೊಟ್ಟಿಹ ಹಕ್ಕು
ಕೇಳಿ ಅರಿಯಿರಿ ಲೋಕಜನ ಸತ್ಯ ಈ ವಾಕ್ಕು
ಕತ್ತಿ ಕೋವಿಗಳೆರಡು ಕೊಡವ ಧಾರ್ಮಿಕ ಗುರುತು
ಮುಂಚೂಣಿಯಲಿ ನಿಲ್ಲುವೆವು ದೇಶಗಡಿ ಕಾದು
ಕೊಡವ ಕುಲಕದು ಹೆಗ್ಗುರುತು ಪ್ರತಿ ಮನೆಗೆ ಕೋವಿ
ಪೂಜಿ ನಿತ್ಯವು ‘ನೆಲ್ಲಕ್ಕಿ’ಯ ದೀಪ ಬಳಿ ತೂಗಿ
ಶುದ್ಧ ಮುದ್ರಿಕೆಯಲಿರಲಿ ಪೂಜಿದ ಆ ಕೋವಿ
ತಪ್ಪಿದರೆ ಶಪಿಸುವಳು ಕೊಡವ ಕುಲ ದೇವಿ
ಕೊಲ್ಲು ಕೊಲೆಗಳಿಗಲ್ಲ ಕೊಡವ ಕುಲಕದು ಕೋವಿ
ಬೆಲೆ ಅರಿಯದವರಿಗದು ನಳಿಗೆ ನಿರ್ಜೀವಿ
ದೇಶ ರಕ್ಷಣೆಗೆಂದು ಎತ್ತುವರು ಕೋವಿ
ಕುಲಧರ್ಮ ಸಂಕೇತವೆಂದದನು ಹೇಳಿ
ತೇದು ಗಂಧವ ಪೂಸಿ ಧೂಪದಾರತಿ ಮಾಡಿ
ದೇಶ ರಕ್ಷಣೆಗೆಂದು ಅದರ ಮಹಿಮೆಯ ಹಾಡಿ
ಗಂಡು ಜನಿಸಿದಾಗ ಗುಂಡು ಸದ್ದದು ಬೇಕು
ಮರಣ ವಾರ್ತೆಯ ಬಿತ್ತರಿಸೆ ಜೋಡು ಗುಂಡಿರಬೇಕು
‘ಕೈಲ್‍ಪೊಳ್ದ್’ ಹಬ್ಬದಲಿ ಕೋವಿ ಪೂಜಲೆ ಬೇಕು
ಹುತ್ತರಿಯ ಕುಯಿಲಿಗೆ ಗುಂಡು ಸಿಡಿಸಲೇ ಬೇಕು
ಕೋವಿ ಇಲ್ಲದ ಮನೆಯು ಮೂರ್ತಿ ಇಲ್ಲದ ಗುಡಿಯು
ಕೋವಿ ಹಿಡಿಯದ ಕೊಡವ ಹೆಣಕೆ ಕಡೆಯು
ಕೊಡವ ಕುಲಕದು ಕೋವಿ ಹರಿಹರರ ಮೂರ್ತಿ
ದೇಶ ರಕ್ಷಣೆ ಮಾಡುವುದೆ ಕೊಡವನಿಗೆ ಕೀರ್ತಿ
ಕೊಡವ ಜನಕದು ಕೋವಿ ಬಾಳಿಗವಿಭಾಜ್ಯ
ಕೊಡವ ಮನೆಯಲಿ ಕೋವಿ ಅದು ನಿತ್ಯ ಪೂಜ್ಯ