ಕೂಡಿಗೆ, ಜ. 4: ಹೊಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಕಸ ವಿಲೇವಾರಿ ಘಟಕದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎನ್. ಮಮತಾ ನೆರವೇರಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಒಣಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗಿದೆ. ಇನ್ನು ಮುಂದೆ ಒಣ ಕಸವನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡದೇ ಮನೆಯ ಹಂತದಲ್ಲಿ ಸಂಗ್ರಹಿಸಿ ಕಸ ವಿಲೇವಾರಿ ವಾಹನ ಬಂದಾಗ ಕೊಡಬೇಕು ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ವಾಹನ ಚಲಿಸಿ ಕಸ ಸಂಗ್ರಹಿಸುತ್ತದೆ. ಸಾರ್ವಜನಿಕರು ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದು ಮತ್ತು ಗ್ರಾಮ ಪಂಚಾಯಿತಿಯನ್ನು ಕಸಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರ ಮುಖ್ಯ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್ ಮೂರ್ತಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಣತ್ಯಾಜ್ಯ, ದ್ರವತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಕೇವಲ ಒಣ ತ್ಯಾಜ್ಯಗಳನ್ನು ಮಾತ್ರ ಕಸ ವಿಲೇವಾರಿ ವಾಹನ ಬಂದಾಗ ನೀಡಬೇಕು ಅಲ್ಲದೆ ಮುಂದಿನ ದಿನಗಳಲ್ಲಿ ನೂತನ ತಾಂತ್ರಿಕ ಕಸ ವಿಲೇವಾರಿ ಘಟಕ ಮತ್ತು ಅದಕ್ಕೆ ಸಂಬಂಧಿಸಿದ ವಾಹನ ಖರೀದಿ ಹೊಸ ಯೋಜನೆಗೆ ಸರಕಾರಕ್ಕೆ ಪ್ರಸ್ತಾವನೆಯಲ್ಲಿ ಕಳುಹಿಸಲಾಗಿದೆ. ಮುಂದಿನ ಕ್ರಿಯಾ ಯೋಜನೆ ಅಡಿಯಲ್ಲಿ ರೂ. 17 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳುವ ಚಿಂತನೆ ನಡೆಸಲಾಗಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಕೆ. ಯೂಸಫ್ ಆಲಿ, ಸದಸ್ಯರುಗಳಾದ ಎಂ.ಬಿ. ಚಿದಂಬರ, ಬಿ.ವೈ. ಪ್ರಭುಶೇಖರ್, ಜಯಣ್ಣ, ಬಡುವಂಡ ಕವಿತಾ ಬೆಳ್ಯಪ್ಪ, ವಿ.ವಿ. ಮಂಜುಳಾ, ಎಂ.ಬಿ. ರೀನಾ, ಕಾರ್ಯದರ್ಶಿ ಕೆ.ಸಿ. ರವಿ, ಸಿಬ್ಬಂದಿಗಳು, ಗ್ರಾಮದ ಯುವಕ ಸಂಘದ ಅಧ್ಯಕ್ಷ ಬಿ.ವೈ. ಆನಂದ, ರಘು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.