ಮಡಿಕೇರಿ, ಜ. 4: ಜಿಲ್ಲೆಯಲ್ಲಿ ತುಂಬಿಕೊಂಡಿರುವ ಅನಧಿಕೃತ ಹೋಂ ಸ್ಟೇಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ದಂಡ ವಿಧಿಸಿ ಮುಚ್ಚಿಸಲು ಮುಂದಾಗಿದೆ. ಈ ಕುರಿತು ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಕೂರ್ಗ್ ಹೋಂ ಸ್ಟೇ ಅಸೋಸಿ ಯೇಷನ್ ಪದಾಧಿಕಾರಿಗಳಿಗೆ ತಿಳಿಸಿದ್ದು, ಪ್ರವಾಸೋದ್ಯಮದ ಹೆಸರು ಹಾಳು ಗೆಡುವ ಏಜೆಂಟರುಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಇತ್ತೀಚೆಗೆ ಅಸೋಸಿಯೇಷನ್ ಪದಾಧಿಕಾರಿಗಳನ್ನು ಕಚೇರಿಗೆ ಕರೆಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಗಳು, ಅನಧಿಕೃತ ಹೋಂ ಸ್ಟೇಗಳಿಗೆ ದಾಳಿ ನಡೆಸಿ ಇಪ್ಪತ್ತೈದು ಸಾವಿರ ರೂ. ದಂಡ ವಿಧಿಸುವುದಾಗಿ ಹೇಳಿದರು. ಅಪರಾಧ ಮತ್ತೆ ಮುಂದುವರೆದರೆ ಐವತ್ತು ಸಾವಿರ ರೂ. ದಂಡ ವಿಧಿಸುವುದಲ್ಲದೆ, ಕಟ್ಟಡಕ್ಕೆ ನೀರು, ವಿದ್ಯುತ್ ಹಾಗೂ ಇತರ ತೆರಿಗೆಗಳನ್ನು ವಾಣಿಜ್ಯ ಎಂದು ಪರಿಗಣಿಸ ಲಾಗುವುದು- ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಹಾಜರಿದ್ದ ಪ್ರವಾಸೋದ್ಯಮ ಇಲಾಖೆಯ ಸಹನಿರ್ದೇಶಕ ರಾಘವೇಂದ್ರ ಅವರು ಆನ್‍ಲೈನ್‍ನಲ್ಲಿ ಗುರುತಿಸಿಕೊಂಡಿರುವ ಹೋಂ ಸ್ಟೇಗಳ ಪಟ್ಟಿ ತಯಾರಿಸುವಂತೆ ಸೂಚಿಸಿದರು.ಸಭೆಯಲ್ಲಿ ಅಸೋಸಿಯೇಷನ್ ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಮಾಜಿ ಅಧ್ಯಕ್ಷ ಕೆ.ಎಂ. ಕರುಂಬಯ್ಯ, ಆಶಿಶ್, ನವೀನ್, ಉಪಾಧ್ಯಕ್ಷೆ ನಿಮ್ಮಿ ಚಂಗಪ್ಪ, ಖಜಾಂಚಿ ಉಷಾ ಗಣಪತಿ ಹಾಗೂ ಇತರರು ಹಾಜರಿದ್ದರು.