ಕುಶಾಲನಗರ, ಜ. 3: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಸಂಘಟನೆಯ ಬಗ್ಗೆ ಅವಹೇಳನಕಾರಿ ಯಾಗಿ ನಿಂದಿಸಿರುವ ವ್ಯಕ್ತಿಯೊಬ್ಬನ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಹಿಂದೂಪರ ಸಂಘಟನೆಗಳ ಪ್ರಮುಖರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಸಂಭವಿಸಿದೆ.

ಕುಶಾಲನಗರದ ಮಾದಾಪಟ್ಟಣ ಬಳಿ ಜ್ಯೂಸ್ ಅಂಗಡಿ ಇಟ್ಟು ಕೊಂಡಿರುವ ವ್ಯಕ್ತಿ ಹ್ಯಾರಿಸ್ ಎಂಬಾತ ದುರ್ಗಾವಾಹಿನಿ ಸಂಘಟನೆ, ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಮತ್ತು ಪ್ರಧಾನಮಂತ್ರಿಯನ್ನು ಉಗ್ರರು, ಭಯೋತ್ಪಾದಕರೆಂದು ತನ್ನ ಮೊಬೈಲ್ ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದು ಈತನ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹ್ಯಾರಿಸ್‍ನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆಗೆ ಒಳಪಡಿಸಿ ಆತನ ವಿರುದ್ಧ ಪ್ರಕರಣ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಕುಶಾಲನಗರ ಪೊಲೀಸ್ ಠಾಣೆ ಬಳಿ ಸೇರಿದ ವಿವಿಧ ಸಂಘಟನೆಗಳ ಪ್ರಮುಖರಾದ ಅಮೃತ್‍ರಾಜ್, ಅನೀಶ್, ವಿನೀತ್, ಕೆ.ಜಿ.ಮನು, ಮಂಜುಳಾ, ಕೃಷ್ಣಪ್ಪ, ಮಂಜುನಾಥ್, ಶಶಿಕುಮಾರ್, ವೈಶಾಖ್, ಪ್ರವೀಣ್, ದೊಡ್ಡಣ್ಣ, ಡಾಟಿ, ವೇದಾವತಿ ಮತ್ತಿತರರು ಆತನನ್ನು ಬಂಧಿಸಿ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.