ವೀರಾಜಪೇಟೆ, ಜ.2: ಇತಿಹಾಸ ಪ್ರಸಿದ್ಧಿ ಹೊಂದಿರುವ ವೀರಾಜಪೇಟೆಯ ಸಿದ್ಧಾಪುರ ರಸ್ತೆಯಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಾಲಯದ ಉತ್ಸವವು ಬುಧವಾರ ರಾತ್ರಿ ವಿಜೃಂಭಣೆಯಿಂದ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ವ್ಯವಸ್ಥಿತವಾಗಿ ಐದು ದಶಕಗಳಿಂದಲೂ ಇಲ್ಲಿನ ಮಲೆತಿರಿಕೆ ಬೆಟ್ಟದ ಅಯ್ಯಪ್ಪ ಸೇವಾ ಸಮಿತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪನ ಉತ್ಸವವು ಡಿ.30ರಿಂದ ಆರಂಭಗೊಂಡು ನಿನ್ನೆ ದಿನ ರಾತ್ರಿ 12-30ಗಂಟೆಗೆ ಅಯ್ಯಪ್ಪ ದೇವಾಲಯದಲ್ಲಿ ಸುಬ್ರಹ್ಮಣ್ಯನಿಗೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸುವುದರೊಂದಿಗೆ ಉತ್ಸವ ತೆರೆ ಕಂಡಿತು.
ತಾ. 30ರಂದು ದೇವಾಲಯದಲ್ಲಿ ಅಯ್ಯಪ್ಪನಿಗೆ ವಿಶೇಷ ಪೂಜೆಯೊಂದಿಗೆ ಆರಂಭಗೊಂಡ ಉತ್ಸವ ತಾ31ರಂದು ವಿಶೇಷ ಪೂಜೆಗಳು ನೆರವೇರಿದವು. ಜನವರಿ 1ರಂದು ಬೆಳಿಗ್ಗೆ ಗಣಪತಿ ಹೋಮ, ಲಕ್ಷಾರ್ಚನೆ, ನಂತರ ಮಹಾಪೂಜಾ ಸೇವೆ ಅಪರಾಹ್ನ 1-30ರಿಂದ 3-30ರವರಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಉತ್ಸವಕ್ಕೆ ಧಾರ್ಮಿಕ ವಿಧಿವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ವಿಶೇಷ ಮೆರುಗನ್ನು ನೀಡಿದವು.
ಅಯ್ಯಪ್ಪ ಉತ್ಸವಕ್ಕೆ ಮೆರುಗು ತಂದು ಕೊಡುವುದು ಸಂಜೆ 7ಗಂಟೆಗೆ ಉತ್ಸವಮೂರ್ತಿಯನ್ನು ಹೊತ್ತುಕೊಂಡು ಭವ್ಯ ಮೆರವಣಿಗೆಯಲ್ಲಿ ಸಾಗುವುದು. ಉತ್ಸವಮೂರ್ತಿಯನ್ನು ಹೊತ್ತ ಮೆರವಣಿಗೆಯ ಮುಂಭಾಗದಲ್ಲಿ ದೀಪದ ಆರತಿ ತಟ್ಟೆಯನ್ನು ಹಿಡಿದ ಬಾಲಕಿಯರು ಹಾಗೂ ಹೆಂಗಳೆಯರು ಸಾಗುತ್ತಿದ್ದರೆ, ಅವರ ಹಿಂದೆ ಕೇರಳದ ಚಂಡೆ ವಾದ್ಯ ಹಾಗೂ ಮನೋರಂಜನಾ ತಂಡಗಳು, ದೀಪಾರತಿ, ವಿದ್ಯುತ್ ಅಲಂಕೃತ ಮಂಟಪದಲ್ಲಿ ಅಯ್ಯಪ್ಪನ ಚಲನ ವಲನಗಳಿರುವ ವಿಗ್ರಹ, ಮೈಸೂರು ಬ್ಯಾಂಡ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ ಹಾಗೂ ಇತರ ಆಕರ್ಷಕ ಮನರಂಜನಾ ತಂಡಗಳು ಸಾಗಿದವು.
ಮೆರವಣಿಗೆಯು ಮಲೆತಿರಿಕೆ ಬೆಟ್ಟದ ಅಯ್ಯಪ್ಪ ದೇವಾಲಯದಿಂದ ಹೊರಟು ತೆಲುಗರ ಬೀದಿ, ಜೈನರಬೀದಿ, ಫಿ.ಮಾ. ಕಾರ್ಯಪ್ಪ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಾಲಯವನ್ನು ತಲುಪಿದ ಮೆರವಣಿಗೆಯ ತಂಡವನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಕಾರ್ಯದರ್ಶಿ ಟಿ.ಕೆ.ರಾಜನ್ ಸ್ವಾಗತಿಸಿದರು.
ಮೆರವಣಿಗೆಯ ಉತ್ಸವ ಮೂರ್ತಿಗೆ ಹಾದಿ ಉದ್ದಕ್ಕೂ ಭಕ್ತಾದಿಗಳು ಈಡುಗಾಯಿ ಹಾಕಿದರೆ ಮುತ್ತೈದೆಯರು ಪೂಜೆ ಸಲ್ಲಿಸಿ ಶ್ರದ್ಧಾ ಭಕ್ತಿಯನ್ನು ಮೆರೆದರು. ಭಕ್ತರು ದಾರಿಯುದ್ದಕ್ಕೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುತ್ತಾ ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಾ ಸಾಗುತ್ತಿದ್ದಂತೆ ಅಯ್ಯಪ್ಪ ಉತ್ಸವದ ಮೆರವಣಿಗೆಯನ್ನು ವೀಕ್ಷಿಸಲು ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದರು. ಮುತ್ತಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಅದೇ ಮಾರ್ಗವಾಗಿ ದೇವಾಲಯಕ್ಕೆ ಹಿಂತಿರುಗಿ ಸುಬ್ರಮಣ್ಯ ದೇವರಿಗೆ ಪೂಜೆ ಸಲ್ಲಿಸುವುದರ ಮುಖಾಂತರ ಉತ್ಸವಕ್ಕೆ ತೆರೆ ಎಳೆಯಲಾಯಿತು.
ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ ಅವರ ನೇತೃತ್ವದಲ್ಲಿ ಸಬ್ಇನ್ಸ್ಪೆಕ್ಟರ್ ಮರಿಸ್ವಾಮಿ ಹಾಗೂ ಪೊಲೀಸ್ ಸಿಬ್ಬಂದಿಗಳು, ಹೋಮ್ಗಾರ್ಡ್ಗಳು ಬಂದೋಬಸ್ತ್ನಲ್ಲಿ ಭಾಗವಹಿಸಿದ್ದರು. ಅಯ್ಯಪ್ಪ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷ ಎಂ.ಕೆ.ಪೂವಯ್ಯ ಅವರ ನೇತೃತ್ವದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಶ್ಯಾಮ್ಕುಮಾರ್, ಜತೆ ಕಾರ್ಯದರ್ಶಿ ಡಿ.ಎಂ.ರಾಜ್ಕುಮಾರ್, ಪದಾಧಿಕಾರಿಗಳಾದ ಪಿ.ಕೆ.ಪ್ರದ್ಯುಮ್ನ, ಬಿ.ಕೆ.ಚಂದ್ರು, ಎ.ಆರ್.ಯೋಗಾನಂದ ರಾವ್, ಮುಕ್ಕಾಟೀರ ಪೊನ್ನಪ್ಪ ಎ.ಎನ್.ದಶರಥ ಉತ್ಸವಕ್ಕಾಗಿ ವಿಶೇಷವಾಗಿ ಶ್ರಮಿಸಿದರು.
ಉತ್ಸವದ ಪ್ರಯುಕ್ತ ದೇವಾಲಯವನ್ನು ತಳಿರು ತೋರಣಗಳಿಂದ, ವಿವಿಧ ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರತಿ ವರ್ಷವೂ ಇಲ್ಲಿ ಜನವರಿ ಒಂದರಂದು ಉತ್ಸವ ನಡೆಯುವುದು ಈ ದೇವಾಲಯದ ವಿಶೇಷತೆ. ಮಹಾಪೂಜೆಯ ಸಂದರ್ಭದಲ್ಲಿ ದೇವಾಲಯದ ಮೇಲ್ಭಾಗದಲ್ಲಿ ಆಕಾಶದಲ್ಲಿ ಗರುಡ ಪಕ್ಷಿಯೊಂದು ದೇವಾಲಯಕ್ಕೆ ಪ್ರದಕ್ಷಿಣೆ ಹಾಕುತ್ತದೆ ಎಂಬ ಪ್ರತೀತಿ ಇದೆ. ಅದರಂತೆ ಈ ಬಾರಿಯು ಗರುಡ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಭಕ್ತರ ಮನ ತಣಿಸಿದೆ.
ದೇಗುಲದ ವತಿಯಿಂದ ಕುಡಿಯುವ ನೀರು, ಪ್ರಸಾದ, ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ತಡರಾತ್ರಿವರೆಗೂ ಅದು ಮುಂದುವರೆದಿತ್ತು. ಉತ್ಸವದ ನಿಮ್ಮಿತ್ತ ವೀರಾಜಪೇಟೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
- ಈಶಾನ್ವಿ