ಮಡಿಕೇರಿ, ಜ. 2: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿ.ಎ.ಎ ಮತ್ತು ಎನ್.ಆರ್.ಸಿಯನ್ನು ರದ್ದು ಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ ವಾದಿ) ಕೊಡಗು ಘಟಕದಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಪೌರತ್ವ ಕಾಯ್ದೆ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ. (ಎಂ) ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ಡಾ.ಐ.ಆರ್ ದುರ್ಗಪ್ರಸಾದ್ ಮಾತನಾಡಿ ಭಾರತದಂತಹ ಸಾರ್ವಭೌಮ ರಾಷ್ಟ್ರದಲ್ಲಿ ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ಜಾತಿ - ಧರ್ಮದ ಹೆಸರಿನಲ್ಲಿ ಜಾರಿಗೆ ತಂದಿದ್ದು, ದೇಶದಲ್ಲಿ ಐಕ್ಯತೆಯಿಂದ ಬಾಳುತ್ತಿರುವವರನ್ನ ಒಡೆದು ಆಳುವ ನೀತಿ ಖಂಡನೀಯ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುನಿಲ್ ಮಾತನಾಡಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು ದೇಶದ ಜಿ ಡಿ ಪಿ ಪಾತಾಳ ತಲುಪಿದೆ ಇದನ್ನು ಸರಿದಾರಿಗೆ ತರಬೇಕಾದ ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ನಾಗರಿಕ ಕಾಯ್ದೆಯನ್ನು ಜಾರಿಗೆ ತಂದು ಬಡ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಮತ ನೀಡಿದ ದೇಶದ ಜನತೆ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ದಿನಗಳಲ್ಲಿ ಸರಕಾರವನ್ನು ತಿರಸ್ಕಾರ ಮಾಡಲಿದ್ದಾರೆ ಎಂದರು. ಮನವಿ ಪತ್ರವನ್ನು ಅಪರಜಿಲ್ಲಾಧಿಕಾರಿ ಡಾ. ಸ್ನೇಹ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಹೇಶ್, ಎನ್.ಡಿ.ಕುಟ್ಟಪ್ಪ, ಪಿ.ಆರ್ ಭರತ್, ಮಹದೇವ್, ಸಿ.ಪಿ.ಐ. ಮುಖಂಡ ಸೋಮಪ್ಪ, ಜೋಸ್, ಎ.ಸಿ.ಸಾಬು, ಅಶ್ರಫ್, ರಮೇಶ್, ಬೈಜು, ಇದ್ದರು.