ಮಡಿಕೇರಿ, ಜ. 2: ಒಂದೊಮ್ಮೆ ಬೆಲೆ ಬಾಳುವ ಹರಳು ಕಲ್ಲು ದಂಧೆ ನಡೆದು ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗಿ ನಂತರದಲ್ಲಿ ಅರಣ್ಯ ಇಲಾಖೆಯಿಂದ ಪ್ರವೇಶ ನಿಷೇಧಿತ ಪ್ರದೇಶವೆಂದು ಘೋಷಿಸಲ್ಪಟ್ಟಿರುವ ಭಾಗಮಂಡಲ ಸನಿಹದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಇದೀಗ ಮತ್ತೆ ಸದ್ದಿಲ್ಲದೆ ಹರಳುಕಲ್ಲು ದಂಧೆ ಆರಂಭವಾಗಿದ್ದು; ಸಾರ್ವಜನಿಕ ಮಾಹಿತಿಯನ್ವಯ ಇದರ ಜಾಡು ಹಿಡಿದ ಅರಣ್ಯ ಇಲಾಖಾಧಿಕಾರಿಗಳು ಈರ್ವರನ್ನು ಬಂಧಿಸಿ ಹರಳು ಕಲ್ಲನ್ನು ವಶಪಡಿಸಿಕೊಂಡಿದ್ದಾರೆ.ಭಾಗಮಂಡಲ ಸನಿಹದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಬೆಲೆ ಬಾಳುವ ಹರಳು ಕಲ್ಲುಗಳಿದ್ದು; ಈ ಹಿಂದೊಮ್ಮೆ ಹರಳು ಕಲ್ಲು ದಂಧೆ ನಡೆದಿತ್ತು. ಬೆಟ್ಟವನ್ನು ಬಗೆದು ಹರಳು ಕಲ್ಲು ಸಾಗಾಟ ಮಾಡಲಾಗಿತ್ತು. ಇದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖಾಧಿಕಾರಿಗಳು ಜಿಲ್ಲಾಡಳಿತದ ನೆರವಿನೊಂದಿಗೆ ಆ ಪ್ರದೇಶಕ್ಕೆ ಬೇಲಿ ಅಳವಡಿಸುವದರೊಂದಿಗೆ; ಕೆಲಸ ಸಮಯ ಕಾವಲಿಗೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ನಿಷೇಧಿತ ಪ್ರದೇಶದಲ್ಲಿ ಹರಳು ಕಲ್ಲು ಭೇಟೆ ಆರಂಭವಾಗಿದೆ. ಪಟ್ಟಿಘಾಟ್‍ನಿಂದ ಹರಳು ಕಲ್ಲು ತೆಗೆದಿರುವ ಬಗ್ಗೆ ಅರಣ್ಯ ಇಲಾಖೆಗೆ ದೊರೆತ ಮಾಹಿತಿ ಮೇರೆಗೆ ಅಧಿಕಾರಿಗಳು ಧಾಳಿ ಮಾಡಿ ಇಬ್ಬರನ್ನು ಹರಳು ಕಲ್ಲು ಸಹಿತ ವಶಕ್ಕೆ ಪಡೆದಿದ್ದು; ಇನ್ನುಳಿದ ಮೂವರು ಆರೋಪಿಗಳ ಶೋಧಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದ ಡಿಸೆಂಬರ್‍ನಲ್ಲಿಯೇ ಅರಣ್ಯದಿಂದ ಹರಳುಕಲ್ಲು ದೋಚಲಾಗಿದೆ. ಆದರೆ ಇದುವರೆಗೆ ಬೆಳಕಿಗೆ ಬಂದಿರಲಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದವರಾರೋ ಎಲ್ಲೋ ಒಂದು ಕಡೆ ಈ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಸ್ಥಳೀಯರ ಸಹಕಾರ ದೊಂದಿಗೆ ಈ ದಂಧೆ ಆಗಿದ್ದು; ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಿಗೆ ಈ ಬಗ್ಗೆ ಯಾರೋ ಮಾಹಿತಿ ನೀಡಿದ ಮೇರೆಗೆ ಇಂದು ಆರೋಪಿಗಳ ಮನೆಗಳಿಗೆ ಧಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವಾರಿ ಮೇಕೇರಿ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಕೆ. ಸಲೀಂ ಹಾಗೂ ಮಡಿಕೇರಿ ತ್ಯಾಗರಾಜಕಾಲೋನಿಯ ಎಂ.ಡಿ. ಶರೀಫ್ ಎಂಬವರುಗಳನ್ನು ವಶಕ್ಕೆ ಪಡೆಯಲಾಗಿದೆ. ಅವರುಗಳ ಮನೆಯನ್ನು ಪರಿಶೀಲನೆ ಮಾಡಿದಾಗ ಸಲೀಂ ಮನೆಯ ಹಿಂಭಾಗದಲ್ಲಿನ ತೋಟದಲ್ಲಿ (ಮೊದಲ ಪುಟದಿಂದ) ಹರಳು ಕಲ್ಲುಗಳಿದ್ದ ಚೀಲಗಳು ಪತ್ತೆಯಾಗಿವೆ. ಅನಿಲ್ ಮನೆಯಲ್ಲೂ ಕಲ್ಲುಗಳು ಸಿಕ್ಕಿವೆ. ಅಲ್ಲದೆ ಪಟ್ಟಿಘಾಟ್ ಅರಣ್ಯದಲ್ಲೂ ಅವಿತಿಟ್ಟಿದ್ದ ಚೀಲಗಳು ಸಿಕ್ಕಿವೆ. ಒಟ್ಟು 25 ಕೆ.ಜಿ. ಗಳಷ್ಟು ಹರಳು ಕಲ್ಲುಗಳು ಸಿಕ್ಕಿದ್ದು; ಅವುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನುಳಿದಂತೆ ಪ್ರಕರಣದಲ್ಲಿ ಮಡಿಕೇರಿಯ ಗೌಡ ಸಮಾಜ ಬಳಿಯ ನಿವಾಸಿ ಅನಿಲ್, ತ್ಯಾಗರಾಜ ಕಾಲೋನಿಯ ಮಹಮ್ಮದ್ ಆಲಿ, ಬೆಟ್ಟಗೇರಿಯ ರಾಶಿದ್ ಅವರುಗಳು ಭಾಗಿಯಾಗಿದ್ದು; ಈ ಮೂವರು ತಲೆಮರೆಸಿಕೊಂಡಿದ್ದಾರೆ. ಮಹಮ್ಮದ್ ಆಲಿ ಹಾಗೂ ಶರೀಫ್ ಸಹೋದರರಾಗಿದ್ದಾರೆ. ದಂಧೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆಯಿದ್ದು; ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಮಡಿಕೇರಿ ವೃತ್ತ ಹಾಗೂ ಭಾಗಮಂಡಲ ವಲಯ ವಿಭಾಗದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ಎಸಿಎಫ್ ಶಿಂಧೆ, ಆರ್.ಎಫ್.ಓ. ಜಗದೀಶ್, ದೇವರಾಜ್, ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಅಮೃತೇಶ್, ದೇವಯ್ಯ, ಸಂಪಾಜೆಯ ರಾಘವ, ಕುಶಾಲನಗರ ವಿಲಾಸ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.