ರಸ್ತೆ, ಬೀದಿ ಬದಿ, ಪ್ರವಾಸಿ ತಾಣ, ಮೋರಿ, ಕೆರೆಕಟ್ಟೆ ಹೀಗೆ ಬಹುತೇಕ ಕಡೆ ನಾವು ಕಣ್ಣು ಹಾಯಿಸಿದಲ್ಲೆಲ್ಲ ಇಂದು ಪ್ಲಾಸ್ಟಿಕ್ ಎಂಬ ವಿಷಕಾರಿ ವಸ್ತು ಕಂಡು ಬರುತ್ತಿದೆ. ಪ್ಲಾಸ್ಟಿಕ್‍ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಪ್ರತಿಯೊಬ್ಬರೂ 50 ವರ್ಷಕ್ಕೂ ಹಿಂದೆಯೇ ಯೋಚಿಸಿದ್ದಲ್ಲಿ ಇಂದು ಪ್ಲಾಸ್ಟಿಕ್ ಬಳಕೆ ಕೊಂಚವಾದರೂ ಕಡಿಮೆಯಾಗಿರು ತ್ತಿತ್ತೋ ಏನೋ ? ಆದರೆ ನಾವು ನಮ್ಮ ಅಗತ್ಯಕ್ಕಾಗಿ ನಿರಂತರವಾಗಿ ಪ್ಲಾಸ್ಟಿಕ್‍ನ್ನು ಬಳಸುತ್ತಲೇ ಬಂದೆವು. ಈಗಲೂ ಬಳಸುತ್ತಲೇ ಇದ್ದೇವೆ. ಇದರ ಪರಿಣಾಮವೇ ಇಂದು ವಿಷಕಾರಿ ಪ್ಲಾಸ್ಟಿಕ್ ನಮಗೆ ಕಂಟಕವಾಗಿ ಪರಿಣಮಿಸತೊಡಗಿದೆ.
ಪ್ರವಾಸಿ ತಾಣಗಳನ್ನು ಹೊರತು ಪಡಿಸಿದರೂ ನಮ್ಮ ಮನೆಯಲ್ಲಿ ಮಾತ್ರ ಪ್ಲಾಸ್ಟಿಕ್ ಹಾವಳಿ ತಪ್ಪಿಲ್ಲ. ನಮ್ಮ ಮನೆಯಂಗಳದಿಂದ ಹಿಡಿದು ದೇಶಾದ್ಯಂತ ಇಂದು ಪ್ಲಾಸ್ಟಿಕ್ ತನ್ನ ಇರುವಿಕೆಯನ್ನು ಹೆಚ್ಚಿಸುತ್ತಲೇ ಇದೆ. ಅನ್ನ, ನೀರು, ಗಾಳಿ ಮಾನವನ ಜೀವನದ ಅವಿಭಾಜ್ಯ ಅಂಗ. ಇದರೊಂದಿಗೆ ಇಂದು ಪ್ಲಾಸ್ಟಿಕ್ ಕೂಡ ಮಾನವನ ಜೀವನದ ಅವಿಭಾಜ್ಯ ಅಂಗವಾಗಿರುವುದು ಇಡೀ ಮನು ಕುಲಕ್ಕೆ ಅಘಾತವಾಗಿರುವ ವಿಚಾರ. ಪ್ಲಾಸ್ಟಿಕ್ ಇಂದು ಅಘಾದವಾಗಿ ತನ್ನ ಇರುವಿಕೆಯನ್ನು ಪ್ರಪಂಚದೆಲ್ಲೆಡೆ ಹರಡಿದ್ದು, ಅತೀ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಇದರ ನಿರ್ವಹಣೆಯೇ ಕಂಟಕವಾಗಿ ಪರಿಣಮಿಸಿದೆ.
ದಿನನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ನಾವು ಪ್ಲಾಸ್ಟಿಕ್‍ನ್ನು ಬಳಸಿ ಎಸೆಯುತ್ತೇವೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಘನ ತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಕಸ ನಿರ್ವಹಣೆಯಲ್ಲಿ ವಿಫಲತೆಗಳೇ ತ್ಯಾಜ್ಯ ಹೆಚ್ಚಳಕ್ಕೆ ಮುಖ್ಯ ಕಾರಣ. ಅಸರ್ಮಕ ಕೆಲಸ, ಕೆಲಸ ಮಾಡುವ ಇಚ್ಚಾಶಕ್ತಿಯ ಕೊರತೆ, ಕಸವನ್ನು ವಿಂಗಡಿಸುವಲ್ಲಿ ಸಾರ್ವಜನಿಕರ ನಿರ್ಲಕ್ಷ್ಯವೇ ಇಂದು ತ್ಯಾಜ್ಯ ಹೆಚ್ಚಳಕ್ಕೆ ಕಾರಣ.
ಸಾರ್ವಜನಿಕರು ಪ್ಲಾಸ್ಟಿಕ್ ಬಳಸಿ ಅದನ್ನು ಎಸೆಯುತ್ತಾರೆ. ಆದರೆ ಅದನ್ನು ಮುನಿಸಿಪಾಲಿಟಿಯವರು, ಕಾಪೆರ್Çೀರೇಷನ್ ಅಥವಾ ನಗರಸಭೆಯವರು ಸ್ವಚ್ಛಗೊಳಿಸುವ ಜವಾಬ್ದಾರಿ ಹೊಂದಿರುತ್ತರಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲವೆನ್ನಬಹುದು. 1940 ರ ದಶಕದಲ್ಲಿ ಭಾರತದಲ್ಲಿ ಪ್ಲಾಸ್ಟಿಕ್ ಕಾರ್ಖಾನೆ ತಲೆ ಎತ್ತಿತ್ತು. ರಾಜ್ಯದಲ್ಲಿ ಪ್ರತಿದಿನ 17 ಮೆಟ್ರಿಕ್ ಟನ್ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಪ್ರಸ್ತುತ ಇದೀಗ ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಪ್ಲಾಸ್ಟಿಕ್‍ನ ಬಳಕೆ 4 ಮಿಲಿಯನ್ ಟನ್.
ಮುನಿಸಿಪಾಲಿಟಿ ತ್ಯಾಜ್ಯವು ಮನೆಗಳಿಂದ, ಬೀದಿ ಬದಿಯ ವ್ಯಾಪಾರದಿಂದ, ಹೋಟೆಲ್‍ಗಳಿಂದ, ಆಸ್ಪತ್ರೆಯಿಂದ ಯಥೇಚ್ಚವಾಗಿ ಬಳಕೆಯಾಗುತ್ತದೆ. ವಿಶ್ವದಾದ್ಯಂತ ಪ್ರತಿ ನಿಮಿಷ ಬರೋಬ್ಬರಿ ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲಿ ಹಾಗೂ ಒಂಭತ್ತು ಮಿಲಿಯನ್ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಎಸೆಯಲಾಗುತ್ತದೆ. ಇನ್ನು ಮುಂದೆಯೂ ಇದೇ ಗತಿಯಲ್ಲಿ ಮುಂದುವರಿದರೆ ವಿಶ್ವ ಆರ್ಥಿಕ ಸಂಸ್ಥೆ ವರದಿಯಂತೆ 2050 ನೇ ಇಸವಿಗೆ ನಮ್ಮ ಸಮುದ್ರದಲ್ಲಿ ಮೀನುಗಳಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ವಸ್ತುಗಳೇ ತುಂಬಿರುತ್ತವೆ. ಈ ಪ್ಲಾಸ್ಟಿಕ್ ಎಂಬ ಪೆಡಂಭೂತದಿಂದ ಹೊರಬರಲು ಹೇಗೆ ಸಾಧ್ಯ ? ಪ್ಲಾಸ್ಟಿಕ್ ಇಲ್ಲದೇ ನಾವು ಹೇಗೆ ಇರಬಲ್ಲೇವು ಎಂಬುದೇ ಈಗ ಇರುವ ಪ್ರಶ್ನೆ. ಪ್ಲಾಸ್ಟಿಕ್ ಬಳಕೆ ಎಂಬುದು ವಿಷದ ಜ್ವಾಲೆಯಂತೆ. ನಿತ್ಯ ಈ ವಿಷದ ಜ್ವಾಲೆಗೆ ನಾವೇ ಮತ್ತಷ್ಟು ಪ್ಟಾಸ್ಟಿಕ್ ಹಾಕುವುದರ ಮೂಲಕ ವಿಷದ ಜ್ವಾಲೆ ಎಲ್ಲೆಡೆ ಹರಡುವಂತೆ ನಾವೇ ಮಾಡುತ್ತೇವೆ. ಆದರಿಂದ ಈ ವಿಷದ ಜ್ವಾಲೆಯನ್ನು ಕಡಿಮೆ ಮಾಡುವ ಹೊಣೆ ನಮ್ಮ ಮೇಲೆಯೇ ಇದೆ. ಹಾಗಾಗಿ ನಾವೇ ನಮ್ಮ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಬೇಕು.
ಪ್ಲಾಸ್ಟಿಕ್‍ನಿಂದ ಮುಕ್ತಿ ಹೇಗೆ ?: ಮೊದಲು ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಬೇಕು. ಒಂದು ದಿನಕ್ಕೆ ಪ್ಲಾಸ್ಟಿಕ್ ನಿಷೇಧ ಸೀಮಿತವಾಗಬಾರದು. ಪ್ಲಾಸ್ಟಿಕ್ ಬಗ್ಗೆ ನಿತ್ಯ ನಿರಂತರಾಗಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರು ತಮ್ಮ ವಾಹನದ ಸೀಟ್ ಹಿಂಭಾಗದಲ್ಲಿ ತ್ಯಾಜ್ಯವನ್ನು ಎಸೆಯಲು ಬ್ಯಾಗ್ ಇಟ್ಟುಕೊಳ್ಳಬೇಕು. ಹಸಿ ಕಸ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಎಸೆಯುವತ್ತ ಗಮನ ಹರಿಸಬೇಕು. ಪ್ರತಿಯೊಬ್ಬರೂ ತಮ್ಮ ತೋಟ, ಮನೆಯ ಸುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಸಾಧ್ಯವಾದಲ್ಲಿ ಅಲ್ಲಲ್ಲಿ ಕಸದ ಡಬ್ಬ ಬಳಕೆ ಮಾಡಬೇಕು.
ನಗರವ್ಯಾಪ್ತಿಯಲ್ಲಿ ಕಸದ ಡಬ್ಬ ಬಳಸುವುದೇ ಆದಲ್ಲಿ ಹಸಿ ಹಾಗೂ ಒಣಕಸವೆಂದು ಪ್ರತ್ಯೇಕವಾಗಿ ವಿಂಗಡಿಸಬೇಕು. ಪ್ರತಿನಿತ್ಯ ಕಸದಡಬ್ಬವನ್ನು ನಗರಸಭೆ ಸಿಬ್ಬಂದಿಗಳು ಸ್ವಚ್ಛಗೊಳಿಸುವಂತಹ ಕಾರ್ಯಕ್ಕೆ ಮುಂದಾಗಬೇಕು. ಕಸ ಸಂಗ್ರಹಿಸುವ ವಾಹನ ಕಡ್ಡಾಯವಾಗಿ ಎಲ್ಲ ವ್ಯಾಪ್ತಿಯ ಪ್ರದೇಶಕ್ಕೂ ತೆರಳುವ ವ್ಯವಸ್ಥೆಯಾಗಬೇಕು, ಹೀಗಾಗದೇ ಇರುವುದರಿಂದ ಕೆಲವು ಕಡೆ ಕಸವನ್ನು ಸುಡುವ ಕಾರ್ಯಕ್ಕೆ ಹಲವು ಮಂದಿ ಮುಂದಾಗುತ್ತಾರೆ. ಇದರಿಂದ ಬರುವ ಹೊಗೆ ಆರೋಗ್ಯಕ್ಕೆ ಹಾನಿಕಾರ.
ಪ್ಲಾಸ್ಟಿಕ್‍ನಿಂದ ಉಪಕಾರಕ್ಕಿಂತ ಉಪದ್ರವವೇ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಅಗತ್ಯ ಇದೆ. ಒಂದು ಅಂದಾಜಿನ ಪ್ರಕಾರ ಪ್ರತಿಯೊಬ್ಬರು ವರ್ಷಕ್ಕೆ ಸುಮಾರು 84 ಕೆ.ಜಿ. ಪ್ಲಾಸ್ಟಿಕ್ ಬಳಸುತ್ತಾರೆಂದು ಹೇಳಲಾಗಿದೆ. ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದಲ್ಲವೇ ? ಪ್ರತಿಯೊಬ್ಬರೂ ಕೈಗೊಳ್ಳುವ ಒಂದು ಸಣ್ಣ ನಿರ್ಣಯ ಮಹತ್ವದ್ದನೇ ಸಾಧಿಸಲು ಕಾರಣವಾಗುತ್ತದೆ. ಹೀಗಾಗಿ ಒಬ್ಬರು ಪ್ಲಾಸ್ಟಿಕ್ ಬಳಸದೇ ಇರುವ ನಿರ್ಣಯ ಕೈಗೊಂಡಲ್ಲಿ ಮುಂದೆ ಈ ನಿರ್ಣಯವೇ ಪ್ಲಾಸ್ಟಿಕ್ ರಹಿತ ಪ್ರಪಂಚಕ್ಕೆ ನಾಂದಿ ಹಾಡಬಹುದಲ್ಲವೇ? ನಮ್ಮ ದೇಶಕ್ಕೆ ಇಷ್ಟಾದರೂ ಕೊಡುಗೆ ನೀಡಲು ನಮ್ಮಿಂದ ಸಾಧ್ಯವಾಗುವುದಿಲ್ಲವೇ ಎಂಬುದನ್ನು ತುಸು ಆಲೋಚಿಸಿ ಹೆಜ್ಜೆ ಇಡೋಣ.
?ಬೊಳ್ಳಜಿರ ಬಿ. ಅಯ್ಯಪ್ಪ