ಬೀಜ ಬಿತ್ತನೆ, ಅಗೆ ತೆಗೆಯು ವಿಕೆ, ನಾಟಿ ಕಾರ್ಯ ಎಲ್ಲವೂ ಮುಗಿದ ಖುಷಿಗೆ ಆಯುಧಗಳಾದ ನೊಗ, ನೇಗಿಲುಗಳ ಪೂಜೆ ಕೈಲ್‍ಮುಹೂರ್ತ ಹಬ್ಬ ಮಾಡಿ ವಿವಿಧ ರೀತಿಯ ಕ್ರೀಡೆಗಳಲ್ಲಿ ಪಾಲ್ಗೊಂಡು, ಇಡೀ ಊರಿಗೆ ಊರೇ ಜತೆಗೂಡಿ ನಲಿದಾಗ ದಣಿದ ದೇಹಕ್ಕೆ ಮತ್ತೆ ಹೊಸ ಹುರುಪು ಬರುವಂತೆ ಮಾಡುವದು. ವಿರಾಮವಿಲ್ಲದೆ ಬೆಳೆ ಹಾಳಾಗದಂತೆ ಹಗಲು ಇರುಳೆನ್ನದೆ ಗದ್ದೆ ಕಾಯುವ ಸರದಿ ಕೆಲಸ ಮನೆ ಮಂದಿಗೆಲ್ಲ. ಕಾಡುಹಂದಿ, ಇಲಿ ಹೆಗ್ಗಣಗಳ ಕಾಟದ ಜೊತೆ ನವಿಲು, ಗಿಳಿ, ತರಾವರಿ ಪಕ್ಷಿಗಳನ್ನು ಹೆದರಿಸಲು ಗದ್ದೆಯ ಮಧ್ಯೆ ಬೆದರುಬೊಂಬೆ (ಬೆರ್ಚಪ್ಪ) ನೆಟ್ಟು ಕಾಯುವಿಕೆಯ ಪ್ರಯತ್ನ. ಸೊಂಪಾದ ಬೆಳೆಗೆ ದೃಷ್ಟಿ ತಾಗದಂತೆ ಪೊರಕೆ, ಕಳ್ಳಿಗಿಡಗಳ ಸಾಥ್ ಕೂಡ ಇದೆ. ಏನೇ ಆದರೂ ಬೆಳೆದ ಬೆಳೆ ಹಾಳಾಗದಂತೆ ಕಾಯುವಿಕೆಗೆ ಆನೆ ಕಾಟದ ಭಯದ ನಡುವೆಯೂ ಬಿತ್ತಿ ತೆನೆ ಕಂಡಾಗ ಮನೆಯ ಯಜಮಾನನ ಮುಖದಲ್ಲಿ ಹುರುಪು ಮತ್ತೆ ಬರುವಂತಾಗುವದು. ಅಂತೂ ಪೈರು ಬೆಳೆದು ನಿಂತಾಗ ಶುಭಗಳಿಗೆ ಗೊತ್ತು ಪಡಿಸಿ ಕಟಾವು ಮಾಡಲು ಸೂಚನೆಯಂತೆ ಹುತ್ತರಿ ಹಬ್ಬದಂದು ಹೊಸ ಬೆಳೆಯನ್ನು ಮನೆ ತುಂಬಿಸುವ ಕಾರ್ಯ, ಹೊಸ ಅಕ್ಕಿಯ ಊಟ ಹಿರಿಯರ ಜೊತೆ ಮನೆಯ ಸದಸ್ಯರೆಲ್ಲ ಜತೆಗೂಡಿ ಸಂಭ್ರಮಿಸುವರು.
ನಾಲ್ಕಾರು ಆಳುಗಳನ್ನು ಕರೆಸಿ ಕತೆ, ಒಗಟು, ಗಾದೆ, ನುಡಿಮುತ್ತು, ಜೀವನಾನುಭವ, ಹಾಸ್ಯಚಟಾಕಿಗಳನ್ನು ಹಾರಿಸುತ್ತಾ ಮನೆಯವರೆಲ್ಲ ಸೇರಿ ಕೊಯ್ಲು ಮಾಡಿ, ರಾಶಿ ಹಾಕಿ, ಕಂತೆ ಬಡಿದು, ಕಾಳು ಬೇರೆ ಮಾಡುವ ಕಾರ್ಯ ಕಷ್ಟದ ನಡುವೆಯೂ ಸುಂದರವಾಗಿರುತ್ತದೆ. ಹುಲ್ಲಿನಿಂದ ಭತ್ತ ಬೇರೆ ಮಾಡಿ ಒಕ್ಕಲು ಕೆಲಸ ಮುಗಿದ ನಂತರ ಧಾನ್ಯ ಒಣಗಿಸುವಿಕೆ, ಅಂಗಳದಲ್ಲಿ ಒಣಗುವ ಕಾಳುಗಳನ್ನು ಕೋಳಿ ತಿನ್ನದಿರಲಿ, ಪಕ್ಷಿಗಳ ಹಿಂಡು ಹೆಕ್ಕಿ ಕೊಂಡೊಯ್ಯದಿರಲಿ ಎಂದು ಉದ್ದನೆಯ ಬಡಿಗೆಯನ್ನು ಹಿಡಿದು ಓಡಿಸುವ ಕಾರ್ಯ, ಮನೆಯ ಕಿರಿಯರಿಗೆ, ಒಟ್ಟಿನಲ್ಲಿ ಎಲ್ಲವನ್ನೂ ಹಂಚಿಕೊಂಡು ಮನೆಯ ಸದಸ್ಯರೆಲ್ಲರೂ ಕೆಲಸ ಮಾಡುವರು. ಇಂದಿನಂತೆ ಮಿಲ್‍ಗಳನ್ನು ಅರ್ಧಗಂಟೆ ಮಾಡುವ ಕೆಲಸವನ್ನು ಅಂದು ಒಂದು ವಾರ ಒನಕೆಯಿಂದ ಕುಟ್ಟಿ ಭತ್ತದಿಂದ ಅಕ್ಕಿ ಮಾಡುವ ಕಾಯಕ ಮುಂದಿನದು.
ಭತ್ತ ಅಕ್ಕಿಯನ್ನು ಜೋಪಾನವಾಗಿಡಲು ದೊಡ್ಡ ಮರದ ಪೆಟ್ಟಿಗೆ ಅಂದರೆ ಪತ್ತಾಯದಲ್ಲಿ ಶೇಖರಣೆ ಮಾಡುವರು. ದಿನ ಬಳಕೆಯ ಅಕ್ಕಿಯನ್ನು ಕೆಲವರು ಭತ್ತದಿಂದ ತಯಾರಿಸಿದ ದೊಡ್ಡ ಮಡಿಕೆಯಲ್ಲಿ ಗ್ರಾಮ್ಯ ಭಾಷೆಯಲ್ಲಿ ‘ಕೊಮ್ಮೆ’ ಎನ್ನುವದರಲ್ಲಿ ತುಂಬಿಡುವರು. ಇನ್ನು ಕೆಲವರು ಅಕ್ಕಿಮುಡಿ ಅಥವಾ ಭತ್ತದ ಮುಡಿ ತಯಾರಿಸಿ ಕಾಳುಗಳು ಹಾಳಾಗದಂತೆ ಸಂರಕ್ಷಿಸುವರು. ಮುಡಿಯನ್ನು ಭತ್ತದ ಹುಲ್ಲಿನಿಂದ ತಯಾರಿಸುವರು. ಒಂದು ಮುಡಿಯಲ್ಲಿ 3 ಕಲಸೆ ಅಕ್ಕಿ ತುಂಬುವರು. ಒಂದೆ ಕಲಸೆ ಅಂದರೆ 14 ಸೇರು. 3 ಕಲಸೆ ಅಂದರೆ 42 ಸೇರು. 1 ಸೇರು ಅಂದರೆ ಒಂದು ಕೆ.ಜಿ.ಗೆ ಕೆಲವು ಗ್ರಾಂಗಳು ಕಡಿಮೆ ಇರುವದು. ಸುಮಾರಾಗಿ 930 ಗ್ರಾಂ ಇರುವದು. ಈಗ ಸೇರು, ಪಾವು, ಸೊಲಗ, ಚಟಾಕುಗಳಲ್ಲಿ ಅಳತೆ ಮಾಡುವ ಕಾಲ ಹೋಗಿ ಕಿ. ಗ್ರಾಂ.ಗಳಲ್ಲೇ ಅಳತೆ ಮಾಡುವರು. ಹೆಂಗಸರು ಈಗ ಅನ್ನಕ್ಕೆ ಅಕ್ಕಿ ಹಾಕುವಾಗ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಪಾವುಗಳ ಅಳತೆ ಹೋಗಿ ಕಪ್, ಗ್ಲಾಸ್‍ಗಳ ಅಳತೆಯಿಂದ ಮಾಡುವರು. ಮುಡಿ ತಯಾರಿಸುವಾಗ ಸೇರು, ಕಲಸೆಗಳ ಅಳತೆಯನ್ನು ಬಳಸುವರು. ಹೆಚ್ಚಾಗಿ ದಕ್ಷಿಣ ಕನ್ನಡದಲ್ಲಿ ಭತ್ತ,ಅಕ್ಕಿಯನ್ನು ಕಾಪಾಡಲು ಮುಡಿಯಲ್ಲಿ ಶೇಖರಿಸುವರು, ಇದನ್ನು ಚೆನ್ನಾಗಿ ಹೊಗೆಯಾಡುವ ಅಟ್ಟದಲ್ಲಿಟ್ಟರೆ ಒಂದು ಅಥವಾ ಎರಡು ವರ್ಷಗಳ ಕಾಲ ಸಂರಕ್ಷಿಸಬಹುದು.
ಭಾಗಮಂಡಲದಲ್ಲಿ ತುಲಾಸಂಕ್ರಮಣದ ಸಮಯದಲ್ಲಿ ಪತ್ತಾಯಕ್ಕೆ ಅಕ್ಕಿ ತುಂಬಿಸುವಂತೆ ದಕ್ಷಿಣ ಕನ್ನಡದಲ್ಲಿ ವರ್ಷದಲ್ಲಿ ಎರಡು ಬೆಳೆ ತೆಗೆಯುವವರು ಮೊದಲ ಬೆಳೆ ಸೆಪ್ಟೆಂಬರ್‍ನಲ್ಲಿ ಸಿಗುವದರಿಂದ ಶುಭ ಲಗ್ನವಾದ ತುಲಾ ಸಂಕ್ರಮಣದಂದೇ ತಯಾರಿಸಿಟ್ಟ ಅಕ್ಕಿ ಮುಡಿಗೆ ಪೂಜೆ ಸಲ್ಲಿಸಿ ‘ಪೊಲಿ ಪೊಲಿ ದೇವಾ’ ಎನ್ನುತ್ತಾ ಅಟ್ಟಕ್ಕೇರಿಸುವರು. ಪತ್ತಾಯದಲ್ಲಿ ಶೇಖರಿಸಿಡುವವರು ಪೂಜೆ ಮಾಡಿ ತುಂಬಿಸಿಟ್ಟು ಬೀಗ ಹಾಕಿ ಇಡುವರು.
ಹಳೆ ತಲೆಮಾರಿನಲ್ಲಿ ಹೆಣ್ಣು ಹೆತ್ತವರು ಗಂಡಿನ ಮನೆ ನೋಡುವ ಶಾಸ್ತ್ರದಲ್ಲಿ ಅಟ್ಟ ಹತ್ತಿ ಅಕ್ಕಿ ಮುಡಿ ಎಷ್ಟಿದೆ ಎಂದು ನೋಡಿ ತಮ್ಮ ಮಗಳು ಊಟಕ್ಕೆ ಕೊರತೆ ಇಲ್ಲದೆ ಬಾಳುವಳೆಂಬ ನಂಬಿಕೆ ಬಂದ ನಂತರ ಹೆಣ್ಣು ಕೊಡುತ್ತಿದ್ದರಂತೆ. ಭತ್ತ, ಅಕ್ಕಿ ಮುಡಿ ಈಗ ನೇಪಥ್ಯಕ್ಕೆ ಸರಿದಿದ್ದರೂ ಕೆಲವು ಕಡೆ ಈಗಲೂ ಅದರ ಬಳಕೆ ಮಾಡಿ ಕಾಳುಗಳನ್ನು ಸಂರಕ್ಷಿಸುವರು. ಮುಡಿ ಕಟ್ಟುವ ಕ್ರಿಯೆ ಕಲಾತ್ಮಕವಾಗಿದ್ದು, ನೋಡಲು ಸುಂದರವಾಗಿದೆ. ಅನೇಕ ದೇವಸ್ಥಾನಗಳಲ್ಲಿ ದೇವರಿಗೆ ಹರಕೆ ಕೊಡು ವವರು, ಅಂತೆಯೇ ದೇವಸ್ಥಾನದಲ್ಲಿ ಉತ್ಸವ ಸಂದರ್ಭ ಅನ್ನ ದಾನ ಮಾಡುವವರು ಅಕ್ಕಿಮುಡಿ ಕೊಟ್ಟು ಹರಕೆ ತೀರಿಸುವ ಪದ್ಧತಿ ಇಂದು ಕೂಡ ನಡೆಯುತ್ತಿದೆ, ಹೊಸ ಮನೆ ಪ್ರವೇಶವಾಗುವ ಸಂದರ್ಭದಲ್ಲೂ ಅಕ್ಕಿ ಮುಡಿ ಬೇಕೇಬೇಕು. ಭತ್ತದ ಹೊಟ್ಟು ಸುಟ್ಟಾಗ ಸಿಕ್ಕ ಉಮಿಕರಿಗೆ ಕಲ್ಲುಪ್ಪು ಸೇರಿದರೆ ಹಲ್ಲುಜ್ಜುವ ಪೌಡರ್‍ರೆಡಿ. ಭತ್ತ ಕುಟ್ಟಿದಾಗ ಸಿಕ್ಕ ಧೂಳು (ತೌಡು) ದನ, ಎಮ್ಮೆ ಹಂದಿಗಳಿಗೆ ಕೊಡುವ ಮೇವಾಗುತ್ತದೆ. ಭತ್ತ, ಹುಲ್ಲು, ಅಕ್ಕಿ, ಉಮಿ ಎಲ್ಲವೂ ಉಪಯೋಗ ವಾದಂತೆ ಮಾನವರಾದ ನಾವು ಯಾವದಕ್ಕೆ ಉಪಯೋಗವಾಗುವೆವು ಎಂಬ ಜಿಜ್ಞಾಸೆ ಬಾರದೆ ಇರದು ಅಲ್ಲವೆ ?
-ಕುಕ್ಕನೂರು ರೇಷ್ಮಾಮನೋಜ್,
ಕುಶಾಲನಗರ.