ಮಡಿಕೇರಿ, ಜ. 2: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಮಡಿಕೇರಿ ಘಟಕದ ವಾರ್ಷಿಕ ಮಹಾಸಭೆ ನಗರದ ಹೆರಿಟೇಜ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಎಲ್.ಐ.ಸಿ. ವ್ಯವಸ್ಥಾಪಕ ಅರುಳ್ ಸೆಲ್ವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಹೆಚ್ಚು ಹೆಚ್ಚು ಪಾಲಿಸಿಗಳನ್ನು ಮಾಡಿ ತಾ. 31 ರೊಳಗೆ ಗುರಿಮುಟ್ಟುವಂತೆ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಿ.ಎ. ಮಂಜುನಾಥ್, ಪ್ರತಿನಿಧಿಗಳಿಗೆ ಇರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಹೆಚ್ಚು ಆದಾಯ ಗಳಿಸುವುದರೊಂದಿಗೆ ಒಕ್ಕೂಟದ ಚಟುವಟಿಕೆಗಳಲ್ಲೂ ಪಾಲ್ಗೊಂಡು ಬೆಳವಣಿಗೆಗೆ ಕೈಜೋಡಿಸುವಂತೆ ಕರೆ ನೀಡಿದರು. ಪ್ರತಿನಿಧಿಗಳಿಗೆ ಕಚೇರಿ ಭತ್ಯೆಯನ್ನು ನೀಡುವಂತೆ ವ್ಯವಸ್ಥಾಪಕರಲ್ಲಿ ಇದೇ ಸಂದರ್ಭ ಅವರು ಮನವಿ ಮಾಡಿದರು.
ಪ್ರಕೃತಿ ವಿಕೋಪ ಸಂದರ್ಭ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬೆಂಗಳೂರಿನಿಂದ ಬಂದ ಒಕ್ಕೂಟದ ಪ್ರತಿನಿಧಿಗಳು ತಲಾ ಐದು ಸಾವಿರ ರೂಪಾಯಿಗಳನ್ನು ನೀಡಿ ಸಹಕರಿಸಿರುವುದನ್ನು ಸ್ಮರಿಸಿಕೊಂಡರು.
ಅಭಿವೃದ್ಧಿ ಅಧಿಕಾರಿ ಸೋಮೇಶ್ ಮಾತನಾಡಿ, ಬರಲಿರುವ ಪಾಲಿಸಿಗಳ ಕುರಿತು ಮಾಹಿತಿ ನೀಡಿದರು. ಹಿರಿಯರಾದ ಕೆ.ಎ. ತಿಮ್ಮಯ್ಯ, ವೈ.ಡಿ. ಮೋಹನ್, ಲೀನಾ ಹಾಗೂ ಎಂ.ಕೆ. ನಾಚಪ್ಪ ಅವರುಗಳನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಒಕ್ಕೂಟದ ಪ್ರಮುಖರಾದ ಬಿ.ಜೆ. ನವೀನಕುಮಾರಿ ಮತ್ತು ರೋಹಿನಾ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಸಭೆಯನ್ನು ನಿಗಮ್ ಗೀತೆಯೊಂದಿಗೆ ಆರಂಭಿಸಲಾಯಿತು, ಕಾರ್ಯದರ್ಶಿ ಭೀಮಯ್ಯ ಕಳೆದ ಸಾಲಿನ ಮಹಾಸಭೆಯ ನಡಾವಳಿಯನ್ನು ವಾಚಿಸಿ ಅನುಮೊದನೆ ಪಡೆದರು. ಖಜಾಂಚಿ ಸವಿತಾ ಲೆಕ್ಕಪತ್ರ ಮಂಡಿಸಿದರು. ಹೆಚ್.ಎಸ್. ಪ್ರೇಮ್ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಸಂಘಟನಾ ಕಾರ್ಯದರ್ಶಿ ಸತೀಶ್ ವಂದಿಸಿದರು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಚಾಮಣ್ಣ, ನಿರ್ದೇಶಕರಾದ ಮಹಮ್ಮದ್ ಕುಂಜ್ಞಿ, ಭವಾನಿ ಶಂಕರ್, ಕೆ.ಪಿ. ಗಣೇಶ್, ಎಂ.ಕೆ. ಕವಿತ, ಎಂ.ಜಿ. ಸುಧಾ ಮತ್ತಿತರರು ಉಪಸ್ಥಿತರಿದ್ದರು.