ಮಡಿಕೇರಿ, ಜ. 2: ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್, ಸೇವಾದಳ, ಕೋಲಾಟದ ಉಡುಪು, ಕೊಡವ ಸಾಂಪ್ರದಾಯಿಕ ಉಡುಪು ಹಾಗೂ ಇತರ ಸಂಸ್ಕøತಿ ಬಿಂಬಿಸುವ ಉಡುಪುಗಳನ್ನು ಧರಿಸಿ, ಡೋಲು ಭಾರಿಸುತ್ತಾ, ನಾಮಫಲಕ ಹೊತ್ತು ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗುತ್ತಾ ಮಕ್ಕಳ ವಿಜ್ಞಾನ ಹಬ್ಬದ ಮೆರವಣಿಗೆಯು ನಗರದಲ್ಲಿ ಸಾಗಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ ಜಾÐನ ವಿಜಾÐನ ಸಮಿತಿ ವತಿಯಿಂದ ರಾಷ್ಟ್ರೀಯ ಆವಿಷ್ಕಾರ ಯೋಜನೆಯಡಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದ ಪ್ರಯುಕ್ತ ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ ಹಳೆಯ ಖಾಸಗಿ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ಸಾಗಿ ಶಾಲಾ ಆವರಣದಲ್ಲಿ ಸಮಾರೋಪ ಗೊಂಡಿತು.
ಜಿ.ಪಂ. ಸಿ.ಇ.ಒ ಕೆ.ಲಕ್ಷ್ಮೀಪ್ರಿಯ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಕಲಾವಿದ ಸತೀಶ್ ಬಿ.ಆರ್ ಸುಂದರವಾದ ವೃಕ್ಷದ ಚಿತ್ರವನ್ನು ರೂಪಿಸಿದರು. ಮೆರವಣಿಗೆಯ ಹಿಂಭಾಗದಲ್ಲಿ, ವಾಹನದಲ್ಲಿ ಕೊಡವ ಸಾಂಪ್ರದಾಯಿಕ ಉಡುಪು, ಗಾಂಧಿ, ನೆಹರು ಹಾಗೂ ಕಾವೇರಿ ಮಾತೆಯ ವೇಷಭೂಷಣಗಳನ್ನು ಧರಿಸಿ ವಿದ್ಯಾರ್ಥಿಗಳು ಮನ ಸೆಳೆದರು.
ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಉಪಾಧ್ಯಕ್ಷ ಬೇಬಿ ಮ್ಯಾಥ್ಯು ಮಾತನಾಡಿ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರ ಸೇರಿದಂತೆ ತಮ್ಮನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ವಿಜ್ಞಾನ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು, ಜಿಲ್ಲೆಯ ಮಕ್ಕಳು ರಾಷ್ಟ್ರೀಯ ವಿಜ್ಞಾನ ಮಟ್ಟದಲ್ಲಿ ಸ್ಪರ್ಧಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳ ಹಬ್ಬದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿಎಸ್.ಮಚ್ಚಾಡೋ ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಿರಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಮುದಾಯದ ಸಹಭಾಗಿತ್ವವನ್ನು ಶೈಕ್ಷಣಿಕ ಕ್ಷೇತ್ರಕ್ಕೆ ಬಳಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಸ್.ಟಿ. ಜವರೇಗೌಡ ಮಾತನಾಡಿ ಮಕ್ಕಳು ಈ ಹಬ್ಬದ ಮೂಲಕ ಆಡುತ್ತಾ, ಹಾಡುತ್ತಾ ವಿಜ್ಞಾನ ಮಾದರಿ ಆಟಿಕೆಗಳ ಮೂಲಕ ಕಲಿಯಲು ಉತ್ತಮ ಅವಕಾಶ ಹೊಂದಿತ್ತಾರೆ ಎಂದು ಹೇಳಿದರು.
ಮಕ್ಕಳ ಹಬ್ಬದ ರೂಪು ರೇಷೆಯ ಕುರಿತು ಮಾತನಾಡಿದ ಸಂಪನ್ಮೂಲ ವ್ಯಕ್ತಿ ಟಿ.ಜಿ.ಪ್ರೇಮ್ ಕುಮಾರ್ ಮಕ್ಕಳಲ್ಲಿ ಸ್ವ ಕಲಿಕೆ, ವೈಜ್ಞಾನಿಕ ಪ್ರಜ್ಞೆಯೊಂದಿಗೆ ಅವರಲ್ಲಿ ಏಕೆ?, ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಮಾತನಾಡಿ ವಿಜ್ಞಾನ ಹಬ್ಬವು ವಿಜ್ಞಾನ ಕಲಿಕೆಯ ಕುರಿತು ಮಕ್ಕಳನ್ನು ಪ್ರೇರೇಪಿಸುವ ಕಾರ್ಯಕ್ರಮವಾಗಿದ್ದು, ಮೂಢ ನಂಬಿಕೆಯನ್ನು ಹೋಗಲಾಡಿಸುವಂತಾಗಬೇಕು ಎಂದು ಹೇಳಿದರು.
ಪ್ರಯೋಗಗಳ ಮೂಲಕ ಕಲಿಯಲು ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಸಮಸ್ಯೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಮಕ್ಕಳಲ್ಲಿ ಪ್ರಶ್ನಿಸುವ ಅಭ್ಯಾಸ ಬೆಳೆಯಬೇಕು ಎಂದು ಅವರು ಹೇಳಿದರು.
ಸಂಚಾಲಕಿ ಗಂಗಮ್ಮ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್, ಶ್ರೀ ಶೈಲ ಬೆಳಗಿ, ಪುಟ್ಟರಂಗನಾಥ್, ವನಜಾಕ್ಷಿ, ಶಾಲಾ ಮುಖ್ಯ ಶಿಕ್ಷಕ ಶಿವರಾಮ್, ಸಂಯೋಜಕ ವಿಲ್ಫ್ರೇಡ್ ಕ್ರಾಸ್ತಾ, ಸೋಮಶೇಖರ್, ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಶಿಕ್ಷಕಿ ಸೌಮ್ಯ ಪ್ರಾರ್ಥಿಸಿ, ಕೆ.ಯು ರಂಜಿತ್ ನಿರೂಪಿಸಿ, ನೋಡಲ್ ಅಧಿಕಾರಿ ಕಾಶೀನಾಥ್ ವಂದಿಸಿದರು.