ಕುಶಾಲನಗರ, ಜ. 2: ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್ ಹೇಳಿದರು.
ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ದೇಶಕ್ಕೆ ಹಲವು ರೀತಿಯ ಯೋಜನೆಗಳು, ಕೊಡುಗೆಗಳನ್ನು ನೀಡಿದಂತಹ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವಲ್ಲಿ ಸಂಘಟಿತ ಪ್ರಯತ್ನದ ಅಗತ್ಯತೆಯಿದೆ. ಜನವಿರೋಧಿ ನೀತಿ ಅನುಸರಿ ಸುತ್ತಿರುವ ಬಿಜೆಪಿ ಪಕ್ಷದಿಂದ ಜನ ಸಾಮಾನ್ಯರನ್ನು ರಕ್ಷಿಸಬೇಕಾದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರ ಕೋಟೆಯ ವೈಭವ ಮರುಕಳಿಸಬೇಕಿದೆ. ಈ ನಿಟ್ಟಿನಲ್ಲಿ ತಳಮಟ್ಟದ ಸಂಘಟನೆ ಬಲವರ್ಧನೆಗೊಳ್ಳುವುದರೊಂದಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕ್ರಿಯಾಶೀಲರಾಗಬೇಕು ಎಂದರು.
ಕೆಪಿಸಿಸಿ ಹಿರಿಯ ಮುಖಂಡ ಟಿ.ಪಿ. ರಮೇಶ್ ಮಾತನಾಡಿ, ಜನರ ನಾಡಿಮಿಡಿತವನ್ನು ಅರಿತು ಕೆಲಸ ಮಾಡಿದಾಗ ಮಾತ್ರ ರಾಜಕಾರಣದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಅಧಿಕಾರ ಲಭಿಸಿದ ಬಳಿಕ ಕೈಕಟ್ಟಿ ಕುಳಿತರೆ ಪಕ್ಷ ಸಂಘಟನೆ ಅಸಾಧ್ಯ. ಜನರ ಸಮಸ್ಯೆಗೆ ಸ್ಪಂದಿಸಬೇಕು. ಎರಡನೇ ಹಂತದ ನಾಯಕರ ಪಡೆ ಸೃಷ್ಠಿಯಾಗಬೇಕು. ಹುದ್ದೆ ಹೊಂದಿರುವ ಪ್ರಮುಖರು ಗಂಭೀರತೆಯಿಂದ, ಮಾನಸಿಕವಾಗಿ ಸಿದ್ದರಾಗಿ, ಗುಂಪುಗಾರಿಕೆಯಿಂದ ಹೊರಗುಳಿದು ಪಕ್ಷವನ್ನು ಕಟ್ಟಿ ಬೆಳೆಸಬೇಕಿದೆ ಎಂದರು.
ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾಂತರಾಜ್, ಕೆ.ಎಂ. ಲೋಕೇಶ್ ಕುಮಾರ್, ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸಲ್ಲದು. ಪಕ್ಷದ ಹಿರಿಯರ ಸಲಹೆ, ಸೂಚನೆಗಳನ್ನು ಪಡೆಯುವ ಮೂಲಕ ಪಕ್ಷವನ್ನು ಬಲ ವರ್ಧನೆಗೊಳಿಸಬೇಕಾಗಿದೆ ಎಂದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಅನಂತಕುಮಾರ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ, ಸೋಮವಾರ ಪೇಟೆ ಬ್ಲಾಕ್ ಅಧ್ಯಕ್ಷ ಸತೀಶ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರು ಮತ್ತು ವಕ್ತಾರರಾದ ಸುರೇಶ್, ಪ್ರಮುಖರಾದ ಎಸ್.ಕೆ. ವೀರಪ್ಪ, ಎಸ್.ಎನ್. ನರಸಿಂಹಮೂರ್ತಿ, ಜನಪ್ರತಿನಿಧಿ ಸುಹಾದ, ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.