ಮಡಿಕೇರಿ, ಡಿ.31: ಕಳೆದ ಎರಡು ವರ್ಷಗಳ ಮುಂಗಾರುವಿನಲ್ಲಿ ತೀವ್ರ ಮಳೆಯ ಪರಿಣಾಮ ಹಾನಿಗೀಡಾಗಿರುವ ಮಡಿಕೇರಿ ಹಾಗೂ ಸಂಪಾಜೆ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ಮಂಗಳೂರು ಮಾರ್ಗ ಅಭಿವೃದ್ಧಿಗಾಗಿ ಕೇಂದ್ರ ಭೂ ಸಾರಿಗೆ ಇಲಾಖೆಯಿಂದ ರೂ. 58.8 ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ. 2018ರ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದ ಭೂ ಕುಸಿತದೊಂದಿಗೆ ಜಲಸ್ಫೋಟದಿಂದ ಈ ಹೆದ್ದಾರಿ ಹಾನಿಗೀಡಾಗಿತ್ತು. 2019ರ ಮುಂಗಾರುವಿನಲ್ಲಿ ಮತ್ತೆ ಮಳೆಯ ತೀವ್ರತೆ ನಡುವೆ ಈ ಮಾರ್ಗದಲ್ಲಿ ಬಿರುಕುಗಳು ಕಾಣಿಸಿಕೊಂಡು; ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.ಈ ಸಂಬಂಧ ಕೊಡಗು - ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಖುದ್ದು ಮನವಿ ಸಲ್ಲಿಸಿದರು. ಸಚಿವರು ಸ್ಪಂದಿಸಿ ಇಂದು ಈ ಹಣ ಮಂಜೂರುಗೊಳಿಸಿರುವದಾಗಿ ಸಂಸದರು ‘ಶಕ್ತಿ’ಗೆ ನೀಡಿರುವ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ. ಕೊಡಗಿನಲ್ಲಿ ರಸ್ತೆ ಹಾನಿಗೀಡಾಗಿರುವ ಬಗ್ಗೆ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿರುವ ಮೇರೆಗೆ; ಅವರು ಈ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದ್ದಾರೆ.(ಮೊದಲ ಪುಟದಿಂದ) ಹಾನಿಗೊಂಡಿರುವ ಹೆದ್ದಾರಿಯ ಅಗತ್ಯವಿರುವ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿಯೊಂದಿಗೆ ಚರಂಡಿ ವ್ಯವಸ್ಥೆ ಮತ್ತು ವಾಹನಗಳ ಸಂಚಾರಕ್ಕೆ ಸುರಕ್ಷತಾ ದೃಷ್ಟಿಯಿಂದ ತಡೆಗೋಡೆ ಇತ್ಯಾದಿ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಲು ಕ್ರಮವಹಿಸುವದಾಗಿ ಸಂಸದರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.