ಮಡಿಕೇರಿ, ಡಿ. 30: ಗೋಣಿಕೊಪ್ಪಲು ಬಳಿಯ ಕೈಕೇರಿ ಗ್ರಾಮದ ವಿಪ್ರ ಸಭಾ ಭವನದಲ್ಲಿ ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತಿನ ಹದಿಮೂರನೆಯ ವೈವಿಧ್ಯಮಯ ಕಾರ್ಯಕ್ರಮ ನೆರವೇರಿತು. ಸಂಚಾಲಕ ಪಿ.ಎಸ್. ವೈಲೇಶ ಆಶಯ ನುಡಿಯಲ್ಲಿ ಬಳಗ ನಡೆದು ಬಂದ ಮತ್ತು ಮುಂದಿನ ಹಾದಿಯ ಬಗ್ಗೆ ವಿವರಣೆ ನೀಡಿದರು.
ಕೊಡಗಿನ ಹಿರಿಯ ಬಹುಭಾಷಾ ಕವಿ ನಾಗೇಶ್ ಕಾಲೂರು ಅಧ್ಯಕ್ಷತೆಯಲ್ಲಿ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಅವರು ಉದ್ಘಾಟಿಸಿ ಮಾತನಾಡುತ್ತಾ; ಒಂದು ವಸ್ತು ಅಥವಾ ಘಟನೆಯನ್ನು ಸಾಮಾನ್ಯ ಜನರು ನೋಡುವ ದೃಷ್ಟಿಯೇ ಬೇರೆ ಒಬ್ಬ ಕವಿ ಅಥವಾ ಬರಹಗಾರ ನೋಡುವ ದೃಷ್ಟಿಯೇ ಬೇರೆ, ಕವಿ ತನ್ನ ಮನದಲ್ಲಿ ಮೂಡುವ ಭಾವನೆಗಳನ್ನು ಭಟ್ಟಿ ಇಳಿಸಿ ಅದನ್ನು ಇತಿಹಾಸ ಸೇರಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಬಿಡುತ್ತಾರೆ ಎಂದರು.
ನಾಗೇಶ್ ಕಾಲೂರು ಯುವ ಕವಿಗಳ ಮನಮುಟ್ಟುವಂತೆ ಉಪನ್ಯಾಸ ನಡೆಸಿಕೊಟ್ಟರು. ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣಮೂರ್ತಿ, ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಶಶಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಧೋಶ್ ಪೂವಯ್ಯ, ಜಿಲ್ಲಾ ಲೇಖಕರ ಬಳಗದ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಬಹುಭಾಷಾ ಕವಯತ್ರಿ ಚಿಮ್ಮಚ್ಚಿರ ಪವಿತ ರಂಜನ್ ರಚಿಸಿದ ವ್ಯಂಗ್ಯಚಿತ್ರಗಳನ್ನು ಪ್ರದರ್ಶನ ಮಾಡಿದರು. ಭಜನೆ, ಗೀತ ಗಾಯನ, ಗಿರೀಶ್ ಕಿಗ್ಗಾಲು ಅವರ ರಸ ಪ್ರಶ್ನೆ, ಸದಾನಂದ ಪುರೋಹಿತ್ ಕುಂಚಗಾಯನ, ಮತ್ತು ಜಿಲ್ಲೆಯ ಹದಿನೇಳು ಕವಿಗಳ ಕವನ ವಾಚನ ನಡೆಯಿತು.
ಯೋಗೀಶ್ ಪಡಂತ್ಯಾಯ ಸ್ವಾಗತಿಸಿ, ಪ್ರಾಯೋಜಕ ಸದಾನಂದ ಪುರೋಹಿತ್ ನಿರೂಪಣೆ ಮಾಡಿದರು. ಎಂ.ಬಿ. ಜಯಲಕ್ಷ್ಮಿ ವಂದನಾರ್ಪಣೆ ಮಾಡಿದರು.