ಸೋಮವಾರಪೇಟೆ, ಡಿ.28: ಮಕ್ಕಳಿಗೆ ಮನೆಯಲ್ಲಿ ನೈತಿಕ ಶಿಕ್ಷಣ ನೀಡುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಿಸಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನೆಯೇ ಮೊದಲ ಪಾಠ ಶಾಲೆ ಎಂಬದನ್ನು ಪೋಷಕರು ಅರಿಯಬೇಕು. ಶಾಲೆಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ತಿಳಿದುಕೊಳ್ಳಬೇಕು. ವಿದ್ಯೆ ನಿಜವಾದ ಸಂಪತ್ತಾಗಿರುವ ದರಿಂದ ಆ ಸಂಪತ್ತನ್ನು ಪೋಷಕರು ಗಳಿಸಬೇಕು. ಕಲಿಕೆಯಲ್ಲಿ ಶಿಸ್ತು, ಶ್ರದ್ಧೆ, ಏಕಾಗ್ರತೆ, ಗುರಿ ಇದ್ದರೆ, ಸಾಧನೆ ಮಾಡಬಹುದು ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮವನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಉದ್ಘಾಟಿಸಿ ಮಾತನಾಡಿ, ಸಂಘದ ವತಿಯಿಂದ ನಡೆಯುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಪೋಷಕರು ಕೈಜೋಡಿಸಬೇಕು. ಸಂಸ್ಥೆಯ ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಪ್ರೀತಿಯಿಂದ ಅಕ್ಷರಾಭ್ಯಾಸ ವನ್ನು ಮಾಡಿಸಬೇಕು ಎಂದರು.

ಕುವೆಂಪು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಿಲ್‍ಡ್ರೆಡ್ ಗೊನ್ಸಾಲ್ವೆಸ್ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಟಿ.ವಿ. ವೀಕ್ಷಣೆಯತ್ತ ಹೆಚ್ಚು ಆಕರ್ಷಿತರಾಗದಂತೆ ಪೋಷಕರು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಶಾಲೆಯ ಬಾತ್ಮೀದಾರರಾದ ಕವಿತಾ ವಿರೂಪಾಕ್ಷ, ವೇದಿಕೆಯ ಉಪಾಧ್ಯಕ್ಷರಾದ ಚಂದ್ರಿಕಾ ಕುಮಾರ್, ಕಾರ್ಯದರ್ಶಿ ಸಂಗೀತಾ ದಿನೇಶ್, ಖಜಾಂಚಿ ಲಾವಣ್ಯ ಮೋಹನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಶರಣ್, ಚಾಣಕ್ಯ ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ಇಂದಿರಾ, ವಾಣಿ ಕಾರ್ಯಕ್ರಮ ನಿರ್ವಹಿಸಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.