ಗೋಣಿಕೊಪ್ಪ ವರದಿ, ಡಿ. 27: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಬೊಟ್ಯತ್ನಾಡ್ ಸ್ಪೋಟ್ರ್ಸ್ ಅಸೋಸಿಯೇಷನ್ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಬೊಟ್ಯತ್ನಾಡ್ ಹಾಕಿ ಟೂರ್ನಿಯಲ್ಲಿ ಅತಿಥೇಯ ಬೊಟ್ಯತ್ನಾಡ್ ಸೇರಿದಂತೆ 4 ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆದಿದ್ದು, ಶನಿವಾರ ಪ್ರಶಸ್ತಿ ಸುತ್ತಿಗೆ ಅಂತಿಮ ಹೋರಾಟ ನಡೆಯಲಿದೆ.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಬೊಟ್ಯತ್ನಾಡ್, ಡ್ರಿಬ್ಲ್ ಹೆಂಪ್, ಬೇಗೂರ್ ಈಶ್ವರ ಯೂತ್ ಕ್ಲಬ್, ವೀರಾಜಪೇಟೆ ಕೊಡವ ಸಮಾಜ ತಂಡಗಳು ಜಯಿಸಿ ಸೆಮಿಗೆ ಪ್ರವೇಶ ಪಡೆದವು.
ಅತಿಥೇಯ ಬೊಟ್ಯತ್ನಾಡ್ ತಂಡವು ಪೊದ್ದಮಾನಿ ಬ್ಲೂಸ್ಟಾರ್ ತಂಡವನ್ನು 7-3 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆಯಿತು. ಬೊಟ್ಯತ್ನಾಡ್ ಪರ 7, 17 ರಲ್ಲಿ ಅಂತರಾಷ್ಟ್ರೀಯ ಆಟಗಾರ ನಿತಿನ್ ತಿಮ್ಮಯ್ಯ 2 ಗೋಲು, 2 ನೇ ನಿಮಿಷದಲ್ಲಿ ಒಲಿಂಪಿಯನ್ ನಿಕಿನ್ ತಿಮ್ಮಯ್ಯ, 35 ರಲ್ಲಿ ಬೋಪಣ್ಣ, 54 ರಲ್ಲಿ ಜತನ್, 56 ರಲ್ಲಿ ಪೊನ್ನಣ್ಣ, ಬ್ಲೂಸ್ಟಾರ್ ಪರ 16 ರಲ್ಲಿ ನಿತಿನ್, 37 ರಲ್ಲಿ ಪುನಿತ್‍ಗೌಡ, 58 ರಲ್ಲಿ ಪವನ್ ಮಡಿವಾಳ್ ತಲಾ ಒಂದೊಂದು ಗೋಲು ಹೊಡೆದು ಮಿಂಚಿದರು. ಅತಿಥೇಯ ತಂಡಕ್ಕೆ ಅಂತರಾಷ್ಟ್ರೀಯ ಆಟಗಾರರು ಗೆಲುವು ತರುವಲ್ಲಿ ಯಶಸ್ವಿಯಾದರು.
ಡ್ರಿಬ್ಲ್ ಹೆಂಪ್ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ವಿರುದ್ದ 4-3 ಗೋಲುಗಳಿಂದ ಮಣಿಸಿತು. ಪೊನ್ನಂಪೇಟೆ ಪರ 8, 30, 36 ನೇ ನಿಮಿಷಗಳಲ್ಲಿ ಮೊಹಮ್ಮದ್ ಫಾಹದ್ ಹ್ಯಾಟ್ರಿಕ್ ಸೇರಿದಂತೆ 3 ಗೋಲು ಹೊಡೆದು ಮಿಂಚು ಹರಿಸಿದರು. ಡ್ರಿಬ್ಲ್ ಪರ 38, 42 ರಲ್ಲಿ ಪ್ರಥ್ವಿ 2 ಗೋಲು, 31 ರಲ್ಲಿ ರಮೇಶ್, 52 ರಲ್ಲಿ ಪವನ್ ತಲಾ ಒಂದೊಂದು ಗೋಲು ಹೊಡೆದರು.
ಬೇಗೂರ್ ಈಶ್ವರ ಯೂತ್ ಕ್ಲಬ್ ತಂಡವು ನಾಪೋಕ್ಲು ಶಿವಾಜಿ ತಂಡವನ್ನು 4-2 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆಯಿತು. ಬೇಗೂರ್ ಪರ 8 ಮತ್ತು 40 ನೇ ನಿಮಿಷಗಳಲ್ಲಿ ರಂಜನ್ ಅಯ್ಯಪ್ಪ 2 ಗೋಲು, 14 ರಲ್ಲಿ ಶೇಷಗೌಡ, 46 ರಲ್ಲಿ ಪೂಣಚ್ಚ, ಶಿವಾಜಿ ಪರ 26 ರಲ್ಲಿ ಆಭರಣ್, 27 ರಲ್ಲಿ ವೀರಣ್ಣ ತಲಾ ಒಂದೊಂದು ಗೋಲು ಹೊಡೆದರು.
ವೀರಾಜಪೇಟೆ ಕೊಡವ ಸಮಾಜ ತಂಡವು ಮಡಿಕೇರಿ ಚಾರ್ಮರ್ಸ್ ತಂಡದ ವಿರುದ್ದ 6-5 ಗೋಲುಗಳ ರೋಚಕ ಗೆಲುವು ದಾಖಲಿಸಿತು. ವೀರಾಜಪೇಟೆ ಪರ 2, 6 ನೇ ನಿಮಿಷಗಳಲ್ಲಿ ಭರತ್, 12, 32 ನೇ ನಿಮಿಷಗಳಲ್ಲಿ ಶಮಂತ್, 25, 36 ರಲ್ಲಿ ಕುಮಾರ್ 2 ಗೋಲು, ಚಾರ್ಮರ್ಸ್ ಪರ 3, 5 ನೇ ನಿಮಿಷದಲ್ಲಿ ಸಂತೋಷ್, 49, 53 ರಲ್ಲಿ ಪ್ರಣಮ್ ಗೌಡ ತಲಾ 2 ಗೋಲು ಹೊಡೆದರು. 43 ನೇ ನಿಮಿಷದಲ್ಲಿ ಮಣಿಕಂಠ 1 ಗೋಲು ಹೊಡೆದರು.
ಅತಿಥೇಯ ಬೊಟ್ಯತ್ನಾಡ್ ಪರ ಒಲಿಂಪಿಯನ್ ಚೇಂದಂಡ ನಿಖಿನ್, ಅಂತರಾಷ್ಟ್ರೀಯ ಆಟಗಾರ ನಿತಿನ್ ತಿಮ್ಮಯ್ಯ, ಎಸ್‍ಎಎಫ್ ಆಟಗಾರ ಪುದಿಯೊಕ್ಕಡ ಪ್ರಧಾನ್ ಸೋಮಣ್ಣ, ಇಂಡಿಯನ್ ತರಬೇತಿ ಶಿಬಿರ ಆಟಗಾರ ಕುಪ್ಪಂಡ ಸೋಮಯ್ಯ, ರಾಜ್ಯ ಆಟಗಾರ ಸೋಮೆಯಂಡ ಅಪ್ಪಚ್ಚು, ಶಿವಾಜಿ ಪರ ಜೂನಿಯರ್ ಇಂಡಿಯಾ ಆಟಗಾರ ಆಭರಣ್, ಚಾರ್ಮರ್ಸ್ ಪರ ಮಣಿ, ಶಿವಾನಂದ್, ರೋಹನ್, ಪೊನ್ನಂಪೇಟೆ ಪರ ಸಾಯ್ ಆಟಗಾರರಾದ ಮೋಕ್ಷಿತ್, ಫಹದ್, ಅಚ್ಚಯ್ಯ, ಸೋಮಣ್ಣ, ಧನುಶ್ ಆಟವಾಡಿ ಗಮನ ಸೆಳೆದರು.