ಮಡಿಕೇರಿ, ಡಿ. 27: ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಿಗೆ, ಯುವ ಸಮೂಹಕ್ಕೆ ರೀಲ್ ಹೀರೋಗಳ ಬಗ್ಗೆ ಅರಿವಿದೆ; ಆದರೆ ರಾಷ್ಟ್ರಕ್ಕಾಗಿ ಪ್ರಾಣತೆತ್ತ, ಸಮಾಜಕ್ಕೆ ಉತ್ತಮ ರೀತಿಯ ಮಾರ್ಗದರ್ಶನವನ್ನು ನೀಡಿರುವಂತಹ ‘ರಿಯಲ್ ಹೀರೋ’ (ನೈಜ ಸಾಧಕರು)ಗಳ ಕುರಿತಾಗಿ ಹೆಚ್ಚಿನ ಅರಿವಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಇಂತಹ ಮಹಾನ್ ಸಾಧಕರ ಯಶೋಗಾಥೆಗಳು ಪಠ್ಯಪುಸ್ತಕಗಳಲ್ಲಿ ಬರುವಂತಾಗಬೇಕು ಎಂದು ನಿವೃತ್ತ ಎಸಿಪಿ ‘ಟೈಗರ್’ ಎಂದೇ ಖ್ಯಾತಿ ಹೊಂದಿರುವ ಬಿದ್ದಂಡ ಬಿ. ಅಶೋಕ್ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿರುನಾಣಿಯ ಮರೆನಾಡು ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ವಿದ್ಯಾರ್ಥಿ ವೃಂದಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡಿದರು. ಜಾತಿ ಎಂಬದು ನಾಲ್ಕು ಗೋಡೆಗಳ ನಡುವೆ ಇರಬೇಕು, ಹೊರ ಬಂದಾಗ ಎಲ್ಲರೂ ಮನುಷ್ಯರೆ; ಜೀವನದಲ್ಲಿ ಎಲ್ಲವೂ ಯಶಸ್ಸು ಕಾಣುವದಿಲ್ಲ. ಕೆಲವೊಮ್ಮೆ ಸೋಲು ಎದುರಾಗುತ್ತದೆ; ಆದರೆ ಎಲ್ಲವನ್ನೂ ಎದೆಗುಂದದೆ ಎದುರಿಸಿ ಮುನ್ನಡೆಯಬೇಕೆಂದ ಅವರು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಉದಾಹರಿಸಿದರು.
ಆಗಸದಿಂದ ಬೀಳುವ ಮಳೆ ನೀರು ಪರಿಶುದ್ಧವಾಗಿರುತ್ತದೆ ಆದರೆ ಅದು ಚರಂಡಿ ಸೇರಿದರೆ; ಉಪಯೋಗವಿಲ್ಲ. ಅದೇ ಮಳೆ ಹನಿ ಕಪ್ಪೆಚಿಪ್ಪಿನ ನಡುವೆ ಸೇರಿದಲ್ಲಿ ಅದು ಮುತ್ತಾಗುತ್ತದೆ ಎಂದ ಅವರು; ಶಿಕ್ಷಕರು, ಪೋಷಕರು ಹಾಗೂ ಉತ್ತಮ ಸ್ನೇಹಿತರು ಕಪ್ಪೆಚಿಪ್ಪಿನಂತೆ ಇವರ ನಡುವೆ ವಿದ್ಯಾರ್ಥಿಗಳು ಸಮಾಜಕ್ಕೆ ‘ಮುತ್ತು’ಗಳಾಗಿ ರೂಪುಗೊಳ್ಳುವಂತಾಗಬೇಕೆಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು, ಜೀವನದಲ್ಲಿ ಶಿಸ್ತು, ನಿರ್ಧಾರ, ಬದ್ಧತೆ, ಸಮರ್ಪಣಾ ಮನೋಭಾವ ಹಾಗೂ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದುರಭ್ಯಾಸಗಳಿಗೆ ಬಲಿಯಾಗಬಾರದು ಎಂದರು. ಮನುಷ್ಯನಿಗೆ ಅಂತರಂಗ ಹಾಗೂ ಬಹಿರಂಗ ಎಂಬ ಎರಡು ಮುಖಗಳಿರುತ್ತವೆ. ಇದರಲ್ಲಿ ಬಹಿರಂಗವಾಗಿ ಗೋಚರಿಸುವ ರೂಪವನ್ನು ಬದಲಿಸಲು ಆಗದು; ಆದರೆ, ಅಂತರಂಗವನ್ನು ಬದಲಿಸಿಕೊಳ್ಳಬಹುದು. ಕೋಪ, ದುರಾಸೆ, ಹೊಟ್ಟೆ ಕಿಚ್ಚು, ಮೋಸ, ದುರಹಂಕಾರದಂತಹ ಭಾವವನ್ನು ಅಂತರಂಗದಿಂದ ತೊಡೆದು ಹಾಕಬೇಕು. ವಿದ್ಯೆ, ವಿನಯದೊಂದಿಗೆ; ದೈಹಿಕ, ಮಾನಸಿಕವಾಗಿ ಸದೃಢರಾಗಬೇಕೆಂದು ಸಲಹೆಯಿತ್ತ ಅವರು ಕುಗ್ರಾಮದ ಶಾಲೆಯ ವಿದ್ಯಾರ್ಥಿಗಳೆಂಬ ಕೀಳರಿಮೆ ತ್ಯಜಿಸಬೇಕು. ಹುಟ್ಟು ಎಂಬದು ಆಕಸ್ಮಿಕ ಆದರೆ, ಬದುಕು ಸಾಧನೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ದೂರದೃಷ್ಟಿತ್ವ ಅಗತ್ಯ ಎಂದರು.
ಮತ್ತೋರ್ವ ಅತಿಥಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಕ್ರಮದೊಂದಿಗೆ ಪ್ರಾಪಂಚಿಕ ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಾಳಿಮಾಡ ಹಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಸ್ಥರ ಸಹಭಾಗಿತ್ವ
ಇದು ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮವಾದರೂ ಮರೆನಾಡ್ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡು ಇದನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇದರಂತೆ ಈ ಬಾರಿ ಸಾರ್ವಜನಿಕರಿಗೂ ಗ್ರಾಮವಾರು ವಾಲಿಬಾಲ್ ಪಂದ್ಯಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ವಿವಿಧ ಕ್ರೀಡೆಗಳನ್ನು ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಲಾಗಿತ್ತು.
ಬೆಳಿಗ್ಗೆ ತಾ.ಪಂ. ಮಾಜಿ ಸದಸ್ಯ ಹಾಗೂ ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ಎಂ. ರಾಜು ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭ ಆಡಳಿತ ಮಂಡಳಿ ಸದಸ್ಯರು, ಮತ್ತಿತರರ ಪ್ರಮುಖರು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಕಾಯಪಂಡ ಎಂ. ಕಿಶೋರ್ ಸ್ವಾಗತಿಸಿದರು. ಕರ್ತಮಾಡ ಸುಜು ಪೊನ್ನಪ್ಪ ಉದ್ಘಾಟಿಸಿದರು ಸಹಶಿಕ್ಷಕ ನಾಗರಾಜು ವಂದಿಸಿದರು. ಈ ಸಂದರ್ಭ ಕಳೆದ ಸಾಲಿನಲ್ಲಿ ಶೇ. 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸನ್ಮಾನ
ಮುಖ್ಯ ಅತಿಥಿಯಾಗಿದ್ದ ಅಶೋಕ್ಕುಮಾರ್ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದಿಂದ ಸನ್ಮಾನಿಸಲಾಯಿತು. ಸಂಜೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಚೆಕ್ಕೇರ ಪಂಚಮ್ ತ್ಯಾಗರಾಜ್ ತಂಡದಿಂದ ಸಂಗೀತ ರಸಮಂಜರಿ ಜರುಗಿತು.