ಮಡಿಕೇರಿ, ಡಿ. 27 : 2019ರ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಜೂನ್, ಜುಲೈ ತಿಂಗಳಿನಲ್ಲಿ ಪ್ರತೀ ದಿನವೂ ಪ್ರಸಾರ ಮಾಡಿದ ಕಾರ್ಯಕ್ರಮಗಳನ್ನು ಪರಿಗಣಿಸಿ ರಾಜ್ಯದ ಮಡಿಕೇರಿ ಆಕಾಶವಾಣಿ ಕೇಂದ್ರಕ್ಕೆ ಕೇಂದ್ರ ಸರ್ಕಾರವು ರಾಷ್ಟ್ರ ಮಟ್ಟದ ಅಂತರರಾಷ್ಟ್ರೀಯ ಯೋಗ ಸಮ್ಮಾನ್ ಪುರಸ್ಕಾರ ಪ್ರಧಾನ ಮಾಡಿದೆ.

ಯೋಗದ ಪ್ರಾಮುಖ್ಯತೆ ಕುರಿತ ಸಂದರ್ಶನಗಳು, ಯೋಗದ ಬಗ್ಗೆ ನೇರ ಪ್ರಸಾರದಲ್ಲಿ ರಸಪ್ರಶ್ನೆಗಳು, ಯೋಗ ಕುರಿತ ತರಬೇತುದಾರರ ಸಲಹೆಗಳು, ತಜ್ಞ ವೈದ್ಯರೊಂದಿಗೆ ಸಂದರ್ಶನಗಳು, ಕೇಳುಗರೊಂದಿಗೆ ನೇರ ಸಂವಾದದಲ್ಲಿ ಅನಿಸಿಕೆಗಳು, ಯೋಗ, ಆರೋಗ್ಯದ ಮಾಹಿತಿ, ರೇಡಿಯೋ ಕೇಳುಗರ ಪತ್ರಾಧಾರಿತ ವಿಚಾರಗಳು, ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಆಯೋಜನೆಯ ಪ್ರಕಟಣೆ ಮತ್ತು ವರದಿ, ಮುಂತಾದವುಗಳ ಪ್ರಸಾರವನ್ನು ಮಡಿಕೇರಿ ಆಕಾಶವಾಣಿ ಕೇಂದ್ರವು ಪ್ರತೀ ನಿತ್ಯ ಒಂದು ತಿಂಗಳ ಕಾಲ ಪ್ರಸಾರ ಮಾಡಿತ್ತು.

ನಗರದ ಆಕಾಶವಾಣಿಯ ಟಿ.ಕೆ.ಉಣ್ಣಿಕೃಷ್ಣನ್ ಅವರ ಮುಂದಾಳತ್ವದಲ್ಲಿ ಡಾ.ವಿಜಯ್ ಅಂಗಡಿ ಅವರು ಈ ಎಲ್ಲಾ ಕಾರ್ಯಕ್ರಮಗಳ ರೂಪರೇಷೆಗಳನ್ನು ಸಿದ್ಧಪಡಿಸಿ, ಆಕಾಶವಾಣಿಯ ಇತರೆ ಸಿಬ್ಬಂದಿಯ ಸಹಕಾರದೊಂದಿಗೆ ಬಿತ್ತರಿಸಲು ವ್ಯವಸ್ಥೆ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಯೋಗ ಕುರಿತ ಕಾರ್ಯಕ್ರಮಗಳ ಪ್ರಸಾರದ ಕಾರ್ಯಕ್ಕೆ ರಾಜ್ಯದಲ್ಲಿ ನಗರದ ಆಕಾಶವಾಣಿ ಕೇಂದ್ರಕ್ಕೆ ಈ ರಾಷ್ಟ್ರೀಯ ಪುರಸ್ಕಾರವನ್ನು ಪ್ರದಾನ ಮಾಡಲಾಗುತ್ತಿದೆ. ದೆಹಲಿಯಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಪ್ರಕಾಶ್ ಜಾವೆಡೇಕರ್ ಅವರು ಜನವರಿ, 7 ರಂದು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.