ವೀರಾಜಪೇಟೆ, ಡಿ. 26 : ಕೇಂದ್ರ ಸರಕಾರದ ಅನುದಾನದ ಯೋಜನೆಯಡಿಯಲ್ಲಿ ಈಗ ನಿರ್ಮಾಣಗೊಂಡಿರುವ ಆಧುನಿಕ ಮತ್ಸ್ಯ ಭವನದ ಒಂದನೇ ಅಂತಸ್ತಿನ ರೂ 95ಲಕ್ಷಗಳ ವೆಚ್ಚದ ಕಾಮಗಾರಿಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಸ್ ಚಾಲನೆ ನೀಡಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭಿಸಲು ಪಟ್ಟಣ ಪಂಚಾಯಿತಿ ಪೂರ್ವ ಸಿದ್ಧತೆ ನಡೆಸಿದೆ.

ಕಳೆದ 2013ರಲ್ಲಿ ಕೇಂದ್ರ ಸರಕಾರದ ಮತ್ಸ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ವೀರಾಜಪೇಟೆಗೆ ರೂ. ಎರಡು ಕೋಟಿ ವೆಚ್ಚದಲ್ಲಿ ಆಧುನಿಕ ಮತ್ಸ್ಯ ಭವನ ನಿರ್ಮಿಸಲು ಕೇಂದ್ರ ಸರಕಾರ ಮಂಜೂರು ಮಾಡಿ ಹಣ ಬಿಡುಗಡೆ ಮಾಡಿತ್ತು. ಆದರೆ ಕಾಮಗಾರಿ ಆಮೆ ನಡಿಗೆಯಲ್ಲಿ ಸಾಗಿದ್ದರಿಂದ ಮತ್ಸ್ಯಭವನದ ನೆಲ ಅಂತಸ್ತು ಪೂರ್ಣಗೊಳ್ಳಲು ಆರು ವರ್ಷಗಳ ಅವಧಿ ಬೇಕಾಯಿತು. ಈಗ ಮೂರು ತಿಂಗಳ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಮತ್ಸ್ಯ ಭವನದ ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು. ಈಗ ನೆಲ ಅಂತಸ್ತಿನಲ್ಲಿ ಸುಮಾರು 19 ವಿಶಾಲವಾದ ಮಳಿಗೆಗಳಿದ್ದು ಈಗಾಗಲೇ ಏಳು ಮಳಿಗೆಗಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ. ಉಳಿದ ಹನ್ನೆರಡು ಮಳಿಗೆಗಳಲ್ಲಿ ಆರು ಮಳಿಗೆಗಳನ್ನು ಕೋಳಿ ಮಾಂಸಕ್ಕೂ, ಆರು ಮಳಿಗೆಗಳನ್ನು ಕುರಿ ಮಾಂಸ ಮಾರಾಟಕ್ಕೆ ಮೀಸಲಿರಿಸಲಾಗಿದೆ. ಜಿಲ್ಲಾಧಿಕಾರಿ ಅನುಮೋದನೆ ದೊರೆತ ತಕ್ಷಣ ಈ ಹನ್ನೆರಡು ಮಳಿಗೆಗಳನ್ನು ಷರತ್ತಿನಂತೆ ಹರಾಜು ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ತಿಳಿಸಿದ್ದಾರೆ.

ಕೇಂದ್ರ ಸರಕಾರದ ಯೋಜನೆಯ ಪ್ರಕಾರ ಒಂದೇ ಸೂರಿನಡಿಯಲ್ಲಿ ಹಸಿಮೀನು, ಒಣಗಿದ ಮೀನು, ಕುರಿಮಾಂಸ ಹಾಗೂ ಕೋಳಿ ಮಾಂಸ ಗ್ರಾಹಕರಿಗೆ ಲಭ್ಯವಾಗಬೇಕೆನ್ನುವ ದೃಷ್ಟಿಯಲ್ಲಿ ಆಧುನಿಕ ಮತ್ಸ್ಯ ಭವನಕ್ಕೆ ಚಾಲನೆ ನೀಡಲಾಗಿದೆ. ಒಂದೇ ಕಟ್ಟಡದ ಸಂಕೀರ್ಣದಲ್ಲಿ ಬರುವ ಈ ಎಲ್ಲ ಮಳಿಗೆಗಳಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಬೇಕೆನ್ನುವ ನಿಬಂಧನೆಯಲ್ಲಿ ಮಾರುಕಟ್ಟೆಗೆ ನಲ್ಲಿ ನೀರನ್ನು ಆಯ್ದ ಸಮಯಗಳಲ್ಲಿ ಸರಬರಾಜು ಮಾಡಲಾಗುತ್ತಿದೆ. ಮತ್ಸ್ಯಭವನದ ನೆಲ ಅಂತಸ್ತಿನಲ್ಲಿರುವ ಒಟ್ಟು 19ಮಳಿಗೆಗಳಿಗೂ ಅನುಕೂಲ ವಾಗುವಂತೆ ಶೀತಲೀಕರಣದ ಕೊಠಡಿಯ ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ ಮಾರಾಟ ವಾಗದೆ ಉಳಿದ ಹಸಿಮೀನು, ಕೋಳಿ ಕುರಿ ಮಾಂಸವನ್ನು ಕೆಡದಂತೆ ದಾಸ್ತಾನಿಡಬಹುದಾಗಿದೆ.

ಈಗ ಪೂರ್ಣಗೊಂಡಿರುವ ಮತ್ಸ್ಯಭವನದಲ್ಲಿ ಮೈಸೂರಿನ ಕೆ.ಆರ್.ಸಾಗರ, ಕೆ.ಆರ್.ನಗರ, ಹಂಪಾಪುರ ವಿವಿಧೆಡೆಗಳಿಂದ ಬರುವ ಹೊಳೆ ಮೀನಿನ ಮಾರಾಟಕ್ಕೂ ಈಗಿನ ಏಳು ಹಸಿಮೀನು ಮಾರಾಟ ಪೈಕಿ ಒಂದು ಮಳಿಗೆಯನ್ನು ನೀಡಲಾಗಿದೆ. ಮತ್ಸ್ಯಭವನದಲ್ಲಿ ಸಮುದ್ರದ 6 ಹಸಿಮೀನಿನ ಮಳಿಗೆಗಳಿರುವುದರಿಂದ ಮತ್ಸ್ಯಭವನದ ಹೊರತು ಪಡಿಸಿದಂತೆ ಇತರೆಡೆಗಳಲ್ಲಿ ಹಸಿಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಕಡಿವಾಣ ಹಾಕಿದೆ. ಇದರಿಂದಾಗಿ ಮತ್ಸ್ಯಭವನ ದಲ್ಲಿಯೇ ಹಸಿಮೀನು ವ್ಯಾಪಾರಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಈ ಮಧ್ಯ ವ್ಯಾಪಾರಿಗಳ ನಡುವೆ ಹೊಡೆದಾಟವೂ ನಡೆಯಿತು. ಗ್ರಾಹಕರಿಗೆ ನ್ಯಾಯ ಸಮ್ಮತವಾದ ಬೆಲೆಯಲ್ಲಿ ಗುಣಮಟ್ಟದ ಹಸಿಮೀನು ದೊರೆಯಬೇಕೆನ್ನುವುದು ಪಟ್ಟಣ ಪಂಚಾಯಿತಿಯ ಉದ್ದೇಶ ಎಂದು ಅಭಿಯಂತರ ಹೇಮ್‍ಕುಮಾರ್ ಹೇಳಿದರು.

ಶುಚಿತ್ವ ಕಾಪಾಡಿ

ವೀರಾಜಪೇಟೆಯ ಆಧುನಿಕ ಮತ್ಸ್ಯಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಮಾರುಕಟ್ಟೆಯಲ್ಲಿ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.