ಗೋಣಿಕೊಪ್ಪಲು, ಡಿ. 26: ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿರುವ ಕಾಡಾನೆಗಳು ಇದೀಗ ಫಸಲಿಗೆ ಬಂದಿರುವ ಕಾಫಿ ಹಣ್ಣುಗಳ ಮೇಲೆ ದೃಷ್ಟಿ ಹಾಯಿಸಿದ್ದು ಕಾಫಿ ತೋಟಗಳನ್ನು ಟಾರ್ಗೆಟ್ ಮಾಡಿಕೊಂಡಿವೆ. ಬ್ರಹ್ಮಗಿರಿ,ನಾಗರಹೊಳೆ,ಅರಣ್ಯ ವ್ಯಾಪ್ತಿಯಿಂದ ನಾಡಿನತ್ತ ಹಿಂಡು ಹಿಂಡಾಗಿ ಬರುತ್ತಿರುವ ಕಾಡಾನೆಗಳು ರೈತರ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಫಸಲಿಗೆ ಬಂದಿರುವ ಕಾಫಿ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಗುಂಪುಗಳಾಗಿ ಆನೆಗಳು ತೋಟದಲ್ಲಿ ಸಂಚರಿಸುತ್ತಿರುವುದರಿಂದ ಕಾಫಿ, ಒಳ್ಳೆ ಮೆಣಸು, ಅಡಿಕೆ ಹಾಗೂ ಬಾಳೆ ಗಿಡಗಳು, ನೆಲಕ್ಕುರುಳಿವೆ. ಕಾಫಿ ಗಿಡದ ರೆಕ್ಕೆಗಳೆಲ್ಲವೂ ಮುರಿದು ಬಿದ್ದಿವೆ. ಕಾಫಿ ಹಣ್ಣಿನ ರುಚಿ ಕಂಡಿರುವ ಕಾಡಾನೆಗಳು ತೋಟಬಿಟ್ಟು ಕದಲುತ್ತಿಲ್ಲ. ಇದರಿಂದ ಕಾಫಿ ತೋಟಗಳಲ್ಲಿ ಕಾರ್ಮಿಕರು ಕಾಫಿ ಕೊಯ್ಯಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಯ ಹಿಂಡಿನಲ್ಲಿ ಮರಿಗಳು ಇರುವುದರಿಂದ ಇವುಗಳು ತೋಟದಲ್ಲೇ ನೆಲೆ ಕಂಡು ಕೊಂಡಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಇವುಗಳನ್ನು ಅರಣ್ಯಕ್ಕೆ ಅಟ್ಟುವ ಪ್ರಯತ್ನ ಮಾಡಿದರೂ ಮತ್ತೆ ತೋಟಗಳತ್ತ ಮುಖ ಮಾಡುತ್ತಿವೆ.
ದ.ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ರೈತರಾದ ಬಾಳೆಯಡ ಅಶೋಕ್,ಅಜ್ಜಮಾಡ ಕುಶಾಲಪ್ಪ, ಹಾಗೂ ಅಜ್ಜಮಾಡ ಮಂದಣ್ಣ ಅವರ ಕಾಫಿ ತೋಟದಲ್ಲಿ ಹತ್ತಕ್ಕೂ ಹೆಚ್ಚಿನ ಕಾಡಾನೆಗಳು ಮರಿಯೊಂದಿಗೆ ಬೀಡು ಬಿಟ್ಟಿದ್ದು ತೋಟದಲ್ಲಿರುವ ಕಾಫಿ.ಒಳ್ಳೆ ಮೆಣಸು,ಅಡಿಕೆ,ಬಾಳೆ ಹಾಗೂ ಸ್ಪಿಂಕ್ಲರ್ ಪೈಪ್ ಸೇರಿದಂತೆ ಜಟ್ಗಳನ್ನು ದ್ವಂಸಗೊಳಿಸಿವೆ. ಈ ಭಾಗದಲ್ಲಿ ಕಾಡಾನೆಯ ಹಾವಳಿ ಮಿತಿಮೀರಿದ್ದು ಹಗಲಿನ ವೇಳೆ ತೋಟಗಳಿಗೆ ತೆರಳಲು ರೈತರು,ಕಾರ್ಮಿಕರು ಭಯ ಬೀಳುತ್ತಿದ್ದಾರೆ. ಸಂಜೆಯ ವೇಳೆಯಂತು ಮನೆ ಬಿಟ್ಟು ಹೊರ ಬರಲಾರದ ಪರಿಸ್ಥಿತಿ ಎದುರಾಗಿದೆ.
ಈ ಪ್ರದೇಶಗಳಲ್ಲಿ ಕಾಡಾನೆಗಳು ಬಹಿರಂಗವಾಗಿಯೇ ಕಾಣಿಸಿಕೊಳ್ಳುತ್ತಿರುವುದರಿಂದ ಕಾರ್ಮಿಕರು ತೋಟ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿರುವುದು ಸಾಮಾನ್ಯವಾಗಿದೆ ತೋಟದಲ್ಲಿನ ಕಾಫಿ ಗಿಡಗಳಲ್ಲಿ ಬಿಟ್ಟಿರುವ ಕಾಫಿ ಹಣ್ಣನ್ನು ತಿಂದು ಎಲ್ಲೆಂದರಲ್ಲಿ ಲದ್ದಿ ಹಾಕಿರುವ ಕಾಡಾನೆಗಳು ನಡೆಯುವ ದಾರಿಯಲ್ಲಿ ಸಿಗುವ ವಸ್ತುಗಳನ್ನು ಧ್ವಂಸಗೊಳಿಸುತ್ತಿವೆ. ಕಾರ್ಮಿಕರು ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ನಡೆಸಿದರೂ ಪಟಾಕಿ ಸದ್ದುಗಳಿಗೆ ಕ್ಯಾರೇ ಎನ್ನುತ್ತಿಲ್ಲ. ಸಂಕಷ್ಟದಲ್ಲಿರುವ ರೈತನಿಗೆ ಇದೀಗ ಕಾಫಿ ಫಸಲು ಕೈ ಹಿಡಿಯುವ ಮುನ್ನವೇ ಕಾಡಾನೆಗಳ ಪಾಲಾಗುತ್ತಿರುವುದರಿಂದ ದಿಕ್ಕೇ ತೋಚದಂತಾಗಿದೆ. ಕಾಫಿ ಬೆಳೆಗಳನ್ನು ನಂಬಿಕೊಂಡು ಬ್ಯಾಂಕ್ನಲ್ಲಿ ಪಡೆದ ಸಾಲಗಳನ್ನು ತೀರಿಸಲಾಗದ ಪರಿಸ್ಥಿತಿ ತಂದೊಡ್ಡಿದೆ.
ಆನೆಯ ಸಂಚಾರಕ್ಕೆ ಗಿಡದಲ್ಲಿರುವ ಕಾಫಿ ಹಣ್ಣುಗಳು ನೆಲಕ್ಕುದುರಿದನ್ನು ಹೆಕ್ಕಲು ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದರೂ ಕಾರ್ಮಿಕರು ಮಾತ್ರ ಈ ಕೆಲಸಕ್ಕೆ ಆಗಮಿಸುತ್ತಿಲ್ಲ. ಹಿಂಡು ಹಿಂಡಾಗಿ ಕಾಡಾನೆಗಳು ದಾಳಿಯಿಡುತ್ತಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಇವುಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ.
ಕಾಡಾನೆಯನ್ನು ನಿಯಂತ್ರಿಸಲು ಇಲಾಖೆ ಸೋಲಾರ್ ಬೇಲಿ, ನೇತಾಡುವ ಸೋಲಾರ್ಬೇಲಿ, ಕಂದಕ,ರೈಲ್ವೆ ಕಂಬಿ ಅಳವಡಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಒಟ್ಟಿನಲ್ಲಿ ಕಾಡಾನೆಯ ಹಾವಳಿಯಿಂದ ರೈತರು, ಕಾರ್ಮಿಕರು ಕಂಗೆಟ್ಟಿದ್ದು ರೈತನ ಕೈ ಸೇರಬೇಕಾದ ಕಾಫಿ ಫಸಲುಗಳು ಗಜರಾಜನ ಹೊಟ್ಟೆಯ ಪಾಲಾಗುತ್ತಿದೆ ಕುರ್ಚಿ ಗ್ರಾಮದ ರೈತರ ಮನೆಗಳಿಗೆ ತೆರಳಿದ ಪೊನ್ನಂಪೇಟೆ ಆರ್ಎಫ್ಓ ತೀರ್ಥ, ಡಿವೈಆರ್ಎಫ್ಓ ಗಣೇಶ್, ಸಿಬ್ಬಂದಿಗಳಾದ ಸಂಜೇಯ್ ಗೌಡ, ರಘುನಾಯಕ್, ಗಜೇಂದ್ರ ಇವರುಗಳು ನಷ್ಟ ಅಂದಾಜಿಸಿ ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿ ತೆರಳಿದ್ದಾರೆ.