ವೀರಾಜಪೇಟೆ, ಡಿ. 24: ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸುತ್ತವೆ ಎಂದು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹೇಳಿದರು.
ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ವಿಪಿಎಲ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳಿಗೆ ಯಾವುದೇ ಜಾತಿ, ಮತ, ಬೇಧ ಇಲ್ಲ. ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳಲು ಅವಕಾಶವಿದ್ದು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್ ಮತೀನ್ ಮಾತನಾಡಿ ಪಟ್ಟಣದಲ್ಲಿ ವಿಪಿಎಲ್ ಕ್ರಿಕೆಟ್ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿ ಪರಿಣಮಿಸಿದೆ ಎಂದರು.
ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮಕುಮಾರ್ ಮಾತನಾಡಿ ಸೋಲು ಎಂಬುದು ಗೆಲುವಿನ ಮೊದಲ ಮೆಟ್ಟಿಲು. ಎಲ್ಲಿಯವರೆಗೆ ನಾವು ಪ್ರಯತ್ನ ಪಡುವುದಿಲ್ಲವೋ ಅಲ್ಲಿಯವರೆಗೆ ಗೆಲುವನ್ನು ಕಾಣಲು ಸಾಧ್ಯವಿಲ್ಲ ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಆಯೋಜಕರ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮೊದಲು ಬ್ಯಾಟ್ ಮಾಡಿದ ಆಯೋಜಕರ ತಂಡ 5 ಓವರ್‍ಗಳಲ್ಲಿ 54 ರನ್ ಗಳಿಸಿತು. ಪಟ್ಟಣ ಪಂಚಾಯಿತಿ ಸದಸ್ಯರ ತಂಡ 34 ರನ್‍ಗೆ ಸೋಲಿಗೆ ಶರಣಾಯಿತು.