ಕಣಿವೆ, ಡಿ. 25: ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವಸತಿ ಗೃಹದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ತಾತ್ಕಾಲಿಕವಾಗಿ ಆರಂಭವಾಗಿದ್ದ ಆಯುರ್ವೇದ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ರೂ. 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ. ರಾಮಚಂದ್ರ ಮಾಹಿತಿ ನೀಡಿದ್ದಾರೆ.

ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಮಸ್ಯೆ ಸೇರಿದಂತೆ ಜಿಲ್ಲೆಯ ಆಯುಷ್ ಇಲಾಖೆಯ ಸಿಬ್ಬಂದಿ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಶಾಲನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡವನ್ನು ನಿರ್ಮಿಸಲು ಜಿಲ್ಲಾ ಪಂಚಾಯತಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ಈ ಸಂಬಂಧ ಕೊಡಗು ಜಿಲ್ಲಾ ಪಂಚಾಯಿತಿ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಕಟ್ಟಡ ಕಟ್ಟಲು ರೂ. 47 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದೆ. ನೂತನ ಕಟ್ಟಡವನ್ನು ಕಟ್ಟುವ ತನಕ ಸರ್ಕಾರಿ ಆಸ್ಪತ್ರೆಯ ಒಳ ಆವರಣದ ಒಂದು ಕೊಠಡಿಯನ್ನು ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆಯಲಾಗಿದೆ. ಕಾಮಗಾರಿಯ ಟೆಂಡರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಟ್ಟಡ ಕಟ್ಟಲಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಾದ್ಯಂತ ಇರುವ ಆಯುಷ್ ಇಲಾಖೆಯ ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಡಾ.ರಾಮಚಂದ್ರ ತಿಳಿಸಿದ್ದಾರೆ.