ಮಡಿಕೇರಿ, ಡಿ. 25: ಸ್ವಾತಂತ್ರ್ಯಕ್ಕಾಗಿ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟೀಷರ ವಿರುದ್ಧ ನಡೆದ ಅಮರ ಸುಳ್ಯ ದಂಗೆ ಹೋರಾಟದ ಪರಂಪರೆ ನಮ್ಮ ಹೆಮ್ಮೆ. ಇದರಲ್ಲಿ ಸುಬೇದಾರ್ ಅಪ್ಪಯ್ಯಗೌಡರು ಸೇರಿದಂತೆ ಗೌಡ ಜನಾಂಗದ ಮುಖಂಡರು ಪ್ರಮುಖರಾಗಿರುವದು ಹೆಮ್ಮೆಯ ವಿಚಾರ; ಇಂತಹ ವಿಚಾರಗಳ ಬಗ್ಗೆ ಯುವ ಪೀಳಿಗೆ ಅರಿತುಕೊಳ್ಳಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಹೇಳಿದರು.

ಕೊಡಗು ಗೌಡ ವಿದ್ಯಾಸಂಘದಲ್ಲಿ ನಡೆದ ಶ್ರೀ ಚೌಡೇಶ್ವರಿ ಗೌಡ ಒಕ್ಕೂಟದ ಸಂತೋಷ ಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲವೊಂದು ಇತಿಹಾಸದ ಬಗ್ಗೆ ಮಾಹಿತಿ ಗಳಿರುವದಿಲ್ಲ; ಈ ಬಗ್ಗೆ ಹಿರಿಯರಿಂದ ತಿಳಿದುಕೊಳ್ಳಬೇಕು. ಆಚಾರ - ವಿಚಾರ - ಸಂಸ್ಕøತಿಗಳನ್ನು ನಮ್ಮ ಹಿರಿಯರು ಕಲಿಸಿದ್ದನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕು. ಆಗ ಮಾತ್ರ ಅವುಗಳು ಉಳಿಯಲು ಸಾಧ್ಯ; ಸಂಸ್ಕøತಿ ಅನನ್ಯತೆ ಉಂಟಾಗಲು ಸಾಧ್ಯವೆಂದು ಹೇಳಿದರು. ಸಮಾಜದಲ್ಲಿ ಯಾವದೇ ಜನಾಂಗವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಸ್ಥಿತಿಗತಿ ಆಧಾರದಲ್ಲಿ ಅಳೆಯ ಲಾಗುತ್ತದೆ. ಗೌಡ ಜನಾಂಗದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಸಾಮಾಜಿಕ ಸ್ಥಿತಿಗತಿಯಲ್ಲಿ ಜನಾಂಗದ ಬಗ್ಗೆ ಸಮಾಜದಲ್ಲಿ ಗೌರವ ಭಾವನೆಯಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಹಲವಷ್ಟು ಸಮುದಾಯಗಳಿದ್ದು; ಎಲ್ಲರಿಗೂ ಎಲ್ಲಾ ಭಾಷೆಗೂ ಅಕಾಡೆಮಿ ಸಿಕ್ಕಿಲ್ಲ; ನಮಗೆ ಅವಕಾಶ ಸಿಕ್ಕಿದೆ. ಸದುಪಯೋಗಪಡಿಸಿಕೊಳ್ಳಬೇಕಿದೆ; ಇನ್ನಷ್ಟು ಪ್ರತಿಭೆಗಳು ಹೊರ ಬರಬೇಕಿದೆ. ಬರವಣಿಗೆಯ ಸಾಹಿತಿಗಳು ಮುಂದೆ ಬರಬೇಕು; ರಾಷ್ಟ್ರ, ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸುವಂತಾಗಬೇಕು ಇಲ್ಲಿಯ ಪರಿಸರ ಸಾಹಿತ್ಯಕ್ಕೆ ಪೂರಕವಾಗಿದೆ ಎಂದು ರಾಷ್ಟ್ರಕವಿ ಕುವೆಂಪು ಅವರನ್ನು ಉದಾಹರಿಸಿದರು. ಗಟ್ಟಿತನ, ಸತ್ವ ಇರುವ ಸಾಹಿತ್ಯ ಬೆಳೆಯಬೇಕಿದ್ದು; ಯುವ ಸಮುದಾಯ ಮುಂದಾಗ ಬೇಕು. ಪ್ರೋತ್ಸಾಹ ನೀಡುವದು ಅಕಾಡೆಮಿಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಮಾತನಾಡಿ; ಜನಾಂಗ ಬಾಂಧವರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಮುಂದೆ ಬರಬೇಕು; ಐಎಎಸ್, ಐಎಎಫ್‍ಎಸ್‍ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಹೇಳಿದರು.

ಪ್ರಸ್ತುತ ಚೌಡೇಶ್ವರಿ ಒಕ್ಕೂಟಕ್ಕೆ ಒಳಪಡುವ ಪ್ರದೇಶಗಳಲ್ಲಿ ನೆಲೆಸಿರುವ ಗೌಡ ಜನಾಂಗದವರು ಸೇರಿದಂತೆ ಇತರ 400 ಕುಟುಂಬಗಳು ಅರಣ್ಯ ಇಲಾಖೆ ಜಾಗವನ್ನು ಅತಿಕ್ರಮಿಸಿ ಕೊಂಡಿರುವದಾಗಿ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸರ್ವೆ ನಡೆಸಿ ಅತಿಕ್ರಮಣ ಆಗಿಲ್ಲವೆಂದು ವರದಿ ಸಲ್ಲಿಸಿದೆ. ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಗುರಿಯಾಗಿರಿಸಿಕೊಂಡು ಈ ರೀತಿಯ ದಾವೆ ಹೂಡಿದ್ದಾರೆ. ಇದಕ್ಕೆ ಈ ವಿಭಾಗದ ಎಲ್ಲರೂ ಜಾತಿ, ಪಕ್ಷಬೇಧ ಮರೆತು ಉತ್ತರ ನೀಡಿದ್ದಾರೆ. ಯಾರೂ ಕೂಡ ಜನಾಂಗ, ಧರ್ಮದ ನಡುವೆ ದ್ವೇಷ ಭಾವನೆ ಮೂಡಿಸುವ ಕೆಲಸ ಮಾಡಬಾರದು. ಬೆರಳೆಣಿಕೆಯ ಮಂದಿ ಈ ರೀತಿಯ ಕೃತ್ಯವೆಸಗುತ್ತಿದ್ದು; ಇದಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕುದುಪಜೆ ಆನಂದ ಮಾತನಾಡಿ; ಜನಾಂಗ ಬಾಂಧವರು ವಿದ್ಯೆಯಲ್ಲಿ ಹಿಂದೆ ಬಿದ್ದಿದ್ದು; ಉನ್ನತ ಹುದ್ದೆಗೆ ಹೋಗಬೇಕು. ಒಕ್ಕೂಟದ ವತಿಯಿಂದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರಥಮ, ದ್ವಿತೀಯ ಎಂದು ಪ್ರೋತ್ಸಾಹಕರ ಬಹುಮಾನ ನೀಡಲಾಗುತ್ತಿದೆ. ಮುಂದಿನ ಸಾಲಿನಿಂದ ಒಕ್ಕೂಟದ ಸದಸ್ಯರ ಹತ್ತನೇ ಹಾಗೂ ಪಿಯುಸಿ ಉತ್ತೀರ್ಣರಾದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹಕರ ಬಹುಮಾನ ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಎಲ್ಲರೂ ನೆರವು ನೀಡಿ ಸಹಕರಿಸಬೇಕೆಂದು ಕೋರಿದರು.

ಇದೇ ಸಂದರ್ಭ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಒಕ್ಕೂಟದ ಸದಸ್ಯರುಗಳು ಹಾಗೂ ಮಕ್ಕಳಿಗೆ ಏರ್ಪಡಿಸಿದ್ದ ಮನರಂಜನಾ ಕ್ರೀಡೆ ಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯ ಕ್ರಮಗಳು ಜರುಗಿದವು. ವೇದಿಕೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸೂದನ ಹರೀಶ್, ಸ್ಥಾಪಕಾಧ್ಯಕ್ಷ ಪೊನ್ನಚನ ಸೋಮಣ್ಣ, ಹಿರಿಯರಾದ ತೆಕ್ಕಡೆ ಮುತ್ತಣ್ಣ, ದೊಡ್ಡೇರ ಪೊನ್ನಪ್ಪ, ಚೆರಿಯ ಮನೆ ತಿಮ್ಮಯ್ಯ ಇತರರು ಇದ್ದರು.

ಒಕ್ಕೂಟದ ನಿರ್ದೇಶಕಿ ತಂಗಮ್ಮ ಹಾಗೂ ತಂಡದವರು ಪ್ರಾರ್ಥಿಸಿದರೆ; ನಿರ್ದೇಶಕಿ ನಾಳನ ಕನ್ನಿಕೆ ಸ್ವಾಗತಿಸಿದರು. ಡಾ. ಕೂಡಕಂಡಿ ದಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರೆ; ನಿರ್ದೇಶಕಿ ಪುದಿಯನೆರವನ ರೇವತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿಡ್ಯಮಲೆ ಆನಂದ ವರದಿ ವಾಚಿಸಿದರು. ಖಜಾಂಚಿ ಪೂಜಾರೀರ ಜಗದೀಶ್ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕಿ ಕಾನಡ್ಕ ಗೀತಾ ನಿರ್ವಹಣೆ ಮಾಡಿದರೆ; ವಕೀಲ ಮುಕ್ಕಾಟಿ ಜಯಚಂದ್ರ ವಂದಿಸಿದರು.