ಮಡಿಕೇರಿ, ಡಿ. 24: 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಿಬಾಣೆ ಸಮೀಪದ ಊರುಗುಪ್ಪೆ ಪೈಸಾರಿಯ ಶ್ರೀ ಅಯ್ಯಪ್ಪ ದೇವಾಲಯದಲ್ಲಿ 50ನೇ ವರ್ಷದ ಮಂಡಲ ಪೂಜೆ ಮಹೋತ್ಸವ ತಾ. 27 ರಂದು ನಡೆಯಲಿದೆ.
ಮಂಡಲ ಪೂಜೆಯ ಅಂಗವಾಗಿ ಬೆಳಿಗ್ಗೆ 4 ಗಂಟೆಗೆ ದೀಪಾರಾಧನೆ, 5 ಗಂಟೆಗೆ ಗಣಪತಿ ಹೋಮ, ಬೆಳಿಗ್ಗೆ 7.30ಕ್ಕೆ ಶ್ರೀ ಅಯ್ಯಪ್ಪ ದೇವಾಲಯದಿಂದ ಮೆರವಣಿಗೆ ಹೊರಟು ಮಾಗ್‍ಡೂರ್ ಶ್ರೀ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ಬೆಳಿಗ್ಗೆ 8ಕ್ಕೆ ಮಾಗ್‍ಡೂರ್ ಶ್ರೀ ಅಯ್ಯಪ್ಪ ದೇವಾಲಯದಿಂದ ಪೂಜೆ ಸಲ್ಲಿಸಿ ನಂತರ ಬೆಳ್ಳಿರಥ ಶ್ರೀ ಮುತ್ತಪ್ಪ ಚಂಡೆ ಹಾಗೂ ಮಂಗಳೂರಿನ ವಾದ್ಯಗೋಷ್ಠಿಯೊಂದಿಗೆ ಕಂಬಿಬಾಣೆಯ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ತೆರಳಿ ಶ್ರೀ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ ನಂತರ ಶ್ರೀ ಅಯ್ಯಪ್ಪ ಸನ್ನಿಧಿಗೆ ತಲುಪಲಾಗುತ್ತದೆ. ಮಧ್ಯಾಹ್ನ 1 ಗಂಟೆಗೆ ಅನ್ನದಾನ ಆಯೋಜಿಸಲಾಗಿದೆ. ಸಂಜೆ 5 ಗಂಟೆಗೆ ಶ್ರೀ ಅಯ್ಯಪ್ಪ ದೇವಾಲಯದಿಂದ ಕಲಶದೊಂದಿಗೆ ಭಕ್ತರು ಶ್ರೀ ಪಂಚಲಿಂಗೇಶ್ವರಿ ದೇವಾಲಯಕ್ಕೆ ಮೆರವಣಿಗೆ ಹೊರಟು ಪೂಜೆ ಸಲ್ಲಿಸಿ ನಂತರ ಭಕ್ತರು ಶ್ರೀ ಅಯ್ಯಪ್ಪನ ಸನ್ನಧಿಗೆ ತಲುಪಲಿದ್ದಾರೆ. ಸಂಜೆ 7ಕ್ಕೆ ಭಜನಾ ಕಾರ್ಯಕ್ರಮದ ನಂತರ ಮಂಗಳಾರತಿ, ರಾತ್ರಿ 9ಕ್ಕೆ ಅನ್ನದಾನ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ.