ಸುಂಟಿಕೊಪ್ಪ, ಡಿ. 24 : ಮಾದಾಪುರ ಜಂಬೂರು ಬಾಣೆಯ ಬಡಕೂಲಿ ಕಾರ್ಮಿಕರನ್ನು ಬಡ್ಡಿಗೆ ಹಣ ನೀಡಿ ಶೋಷಣೆ ಮಾಡುತ್ತಿದ್ದ ಮಹಿಳೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ,ಪೊಲೀಸ್ ಇಲಾಖೆ ಹಾಗೂ ಮಾದಾಪುರ ಗ್ರಾ.ಪಂ. ಪಿಡಿಓ ಇವರುಗಳು ಆಕೆಯ ವ್ಯವಹಾರಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳಾ ಕೂಲಿ ಕಾರ್ಮಿಕರಿಗೆ 1000 ರೂ.ಗೆ ವಾರಕ್ಕೆ 100 ರೂ.ನಂತೆ 10,000 ರೂ.ಗೆ 1000 ರೂ. ನಂತೆ ಬಡ್ಡಿ ದಂಧೆ ನಡೆಸುತ್ತಿದ್ದ ಮಹಿಳೆಯು ಅವರು ಕರೆದುಕೊಂಡ ತೋಟಕ್ಕೆ ಕೂಲಿ ಕೆಲಸಕ್ಕೆ ಬರಬೇಕು ಎಂಬ ಅಲಿಖಿತ ಕಟ್ಟಪ್ಪಣೆ ಹೊರಡಿಸಿದ್ದಳು. ಇದರಿಂದ ನೊಂದ ಮಹಿಳೆಯರು ಪತ್ರಿಕೆಗೆ ದೂರು ನೀಡಿದ ಮೇರೆ ತಾ. 17 ರಂದು ವರದಿ ಪ್ರಕಟವಾಗಿತ್ತು.

ಬಡ್ಡಿ ವ್ಯವಹಾರ ನಡೆಸುತ್ತಿರುವ ಬಗ್ಗೆ ನಮ್ಮ ಗ್ರಾಮಲೆಕ್ಕಿಗರು ಸ್ಥಳ ಪರಿಶೀಲಿಸಿ ದಾಖಲಾತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಿ ವರದಿಯನ್ನು ಉಪವಿಭಾಗ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಜೀತ ಪದ್ದತಿಯಾದರೆ ಕ್ರಮಕೈಗೊಳ್ಳಲಾಗುವುದು.

- ಕೆ. ಶುಭ ಉಪತಹಶೀಲ್ಧಾರರು,

- ಶಿವಪ್ಪ ಕಂದಾಯ ಪರಿವೀಕ್ಷಕರು ಸುಂಟಿಕೊಪ್ಪ

ಮಾದಾಪುರ ಗ್ರಾಮ ಪಂಚಾಯಿತಿಯಿಂದ ಪತ್ರಿಕೆಯಲ್ಲಿ ಕೂಲಿ ಕಾರ್ಮಿಕರಿಗೆ ಬಡ್ಡಿಹಣ ನೀಡಿ ಕಿರುಕುಳ ನೀಡುತ್ತಿರುವ ಬಗ್ಗೆ ವರದಿಯಾಗಿದ್ದನ್ನು ಗಮನಿಸಿ ಜಂಬೂರು ಗ್ರಾಮದ ಮಹಿಳೆ ಮನೆಗೆ ತೆರಳಿ ವಿಚಾರಿಸಿದಾಗ ಕೆಲ ದಾಖಲಾತಿಗಳನ್ನು ನೀಡಿದ್ದಾರೆ. ಈ ದಾಖಲಾತಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ಕಳುಹಿಸಿ ಕ್ರಮಕೈಗೊಳ್ಳಲು ಶಿಫಾರಸ್ಸು ಮಾಡಲಾಗುವುದು.

- ಪೂರ್ಣಕುಮಾರ್, ಅಭಿವೃದ್ಧಿ ಅಧಿಕಾರಿ, ಮಾದಾಪುರ ಪಂಚಾಯಿತಿ