ಮಡಿಕೇರಿ, ಡಿ. 24: ಕಂಕಣ ಸೂರ್ಯಗ್ರಹಣ ತಾ. 26 ರಂದು ಘಟಿಸಲಿದ್ದು, ಈ ಅಪರೂಪದ ಖಗೋಳ ವಿದ್ಯಮಾನವನ್ನು ಶಾಲಾ ಮಕ್ಕಳಾದಿಯಾಗಿ ಸಾರ್ವಜನಿಕರು ವೀಕ್ಷಿಸಲು ಸಕಲ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆಯೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಘಟಕರಾದ ಟಿ.ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೊಡಗಿನ ದಕ್ಷಿಣ ಭಾಗದ ಕುಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಕಣ ಸೂರ್ಯಗ್ರಹಣ ಶೇ.95 ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಲಿದೆ.
ಅಪರೂಪದ ಕಂಕಣ ಸೂರ್ಯಗ್ರಹಣ ಕೊಡಗಿನಲ್ಲಿ ತಾ. 26 ರಂದು ಬೆಳಿಗ್ಗೆ 8.04 ಗಂಟೆಯಿಂದ 11.04 ಗಂಟೆವರೆಗೆ ಗೋಚರಿಸಲಿದೆ.
ಗ್ರಹಣವನ್ನು ‘ಸೌರ ಕನ್ನಡ’ಕವನ್ನು ಬಳಸಿ ಸುರಕ್ಷಿತವಾಗಿ ಮಾತ್ರ ವೀಕ್ಷಣೆ ಮಾಡಬೇಕೆಂದು ತಿಳಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಉಪಾಧ್ಯಕ್ಷ ಎಂ.ಇ. ಮೊಹಿದ್ದೀನ್, ಗ್ರಹಣವನ್ನು 20 ರಿಂದ 25 ಸೆಕೆಂಡ್ಗಳಿಗೂ ಹೆಚ್ಚಿನ ಕಾಲ ನಿರಂತರವಾಗಿ ವೀಕ್ಷಣೆ ಮಾಡ ಕೂಡದು. ನಡು ನಡುವೆ ಬಿಡುವು ನೀಡುತ್ತಾ ಕಂಕಣ ಸೂರ್ಯಗ್ರಹಣ ವೀಕ್ಷಿಸುವಂತೆ ಸಲಹೆ ನೀಡಿದರು.
ಕುಟ್ಟದಲ್ಲಿ ಗ್ರಹಣ ವೀಕ್ಷಣೆಗೆ ಬರುವವರಿಗೆ ಶ್ರೀಮಂಗಲ ಬಳಿಯ ಕಾಕೂರು ಜೆಸಿ ಶಾಲೆಯಲ್ಲಿ ವಸತಿ ಹಾಗೂ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆಯೆಂದು ಮಾಹಿತಿ ಯನ್ನಿತ್ತರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷÀತ್ನ ರಾಜ್ಯ ಉಪಾಧ್ಯಕ್ಷರಾದ ವೆಂಕಟ ನಾಯಕ್ ಮಾತನಾಡಿ, ಗ್ರಹಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯಗಳಲ್ಲಿ ಇರುವ ಎಲ್ಲಾ ಮೌಢ್ಯಗಳನ್ನು ಬದಿಗಿಟ್ಟು, ಅಪರೂಪಕ್ಕೆ ಸಂಭವಿಸುವ ಕಂಕಣ ಸೂರ್ಯಗ್ರಹಣವನ್ನು ಸುರಕ್ಷಿತ ವಿಧಾನಗಳಿಂದ ವೀಕ್ಷಿಸಲು ಪ್ರತಿಯೊಬ್ಬರು ಮುಂದೆ ಬರಬೇಕೆಂದು ಕರೆ ನೀಡಿದರು. ಗ್ರಹಣ ವೀಕ್ಷಣ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಕೆ.ಟಿ. ಬೇಬಿ ಮ್ಯಾಥ್ಯು ಅವರು, ಮಡಿಕೇರಿ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಗ್ರಹಣ ವೀಕ್ಷಣೆÉಗೆ ವ್ಯವಸ್ಥೆಗಳನ್ನು ಮಾಡಿರುವುದಾಗಿ ಮಾಹಿತಿ ನೀಡಿದರು.
ಹವ್ಯಾಸಿ ಖಗೋಳ ವೀಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಜಿ. ಶ್ರೀನಾಥ್ ಮಾತನಾಡಿ, ಈ ಬಾರಿಯ ಕಂಕಣ ಸೂರ್ಯಗ್ರಹಣವನ್ನು ಮತ್ತೆ ನೋಡಬೇಕೆಂದರೆ 45 ವರ್ಷಗಳನ್ನು ಕಾಯಬೇಕು. ಮುಂದೆ 2064 ರಲ್ಲಷ್ಟೆ ಕಂಕಣ ಸೂರ್ಯಗ್ರಹಣ ನಡೆಯ ಲಿದೆಯೆಂದು ಮಾಹಿತಿಯನ್ನಿತ್ತರು.
ಇದೇ ಸಂದರ್ಭ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಕಂಕಣ ಸೂರ್ಯಗ್ರಹಣ ಕುರಿತಾದ ಭಿತ್ತಿ ಪತ್ರ ಮತ್ತು ಸೌರ ಕನ್ನಡಕವನ್ನು ಬಿಡುಗಡೆ ಮಾಡಿದರು.
ಸೂರ್ಯೋತ್ಸವ ಮತ್ತು ಗ್ರಹಣ ವೀಕ್ಷಣ ಕಾರ್ಯಕ್ರಮಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕÀ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ಸೂರ್ಯಗ್ರಹಣ ವೀಕ್ಷಣಾ ಸಮಿತಿ ಸಂಚಾಲಕ ಎಂ.ಪಿ. ಕೇಶವ ಕಾಮತ್ ತಿಳಿಸಿದರು.