ಕುಶಾಲನಗರ, ಡಿ. 25 : ಕೊಡವ ಬುಡಕಟ್ಟು ಜನರಿಗೆ ವಿಶೇಷ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಸಂವಿಧಾನದ ವಿಧಿ ಪ್ರಕಾರ ವಿಶೇಷ ರಾಜಕೀಯ ಸಬಲೀಕರಣ ಸಂಬಂಧ ಭೂಮಾಲೀಕತ್ವ ಹಕ್ಕನ್ನು ಮತ್ತಷ್ಟು ದೃಢಗೊಳಿಸಬೇಕು ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವಂತಾಗಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಶಾನ್ಯ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಸಂವಿಧಾನದ ವಿಧಿ 371 ರೆಡ್ ವಿತ್ 5 ಮತ್ತು 6ನೇ ಶೆಡ್ಯೂಲ್ ಪ್ರಕಾರ ಈ ಸಂಬಂಧ ಕೇಂದ್ರ ಗೃಹ ಇಲಾಖೆ ಸಂವಿಧಾನ ತಿದ್ದಿಪಡಿಗೆ ಚಾಲನೆ ನೀಡುತ್ತಿದೆ. ಇದೇ ಸಂದರ್ಭ ಕೊಡವ ಬುಡಕಟ್ಟು ಜನಾಂಗ ಮತ್ತು ಅವರ ಜನ್ಮಭೂಮಿ ಕೊಡವ ನೆಲವನ್ನು ರಕ್ಷಿಸಲು ಈ ಅವಕಾಶವನ್ನು ಕೇಂದ್ರ ಸರಕಾರ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಅಸ್ಸಾಂ ರಾಜ್ಯಕ್ಕೆ ಸೀಮಿತಗೊಳಿಸಿದ ಎನ್ಆರ್ಸಿ ಕಾಯ್ದೆಯನ್ನು ಕೊಡಗು ಸೇರಿದಂತೆ ರಾಷ್ಟ್ರವ್ಯಾಪಿ ಜಾರಿಗೊಳಿಸಬೇಕೆಂದು ಸಿಎನ್ಸಿ ಒತ್ತಾಯಿಸುತ್ತಾ ಬಂದಿದೆ. ಈ ಮೂಲಕ ರಾಷ್ಟ್ರವಿರೋಧಿ ರೋಹಿಂಗ್ಯ ನುಸುಳುಕೋರರು ಮತ್ತು ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಕಾನೂನಾತ್ಮಕವಾಗಿ ಹೊರದಬ್ಬಲು ಸಾಧ್ಯ ಎಂದ ಅವರು, ಎಸ್ ಆರ್ ಸಿ ಯಿಂದ ದೇಶವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡಲು ಒಂದು ಅಸ್ತ್ರವಾಗಲಿದೆ ಎಂದರು.
ಈ ಸಂದರ್ಭ ಸಿಎನ್ಸಿ ಪ್ರಮುಖರಾದ ಪುಲ್ಲೇರ ಕಾಳಪ್ಪ, ನಂದಿನೆರವಂಡ ವಿಜು ಗೋಷ್ಠಿಯಲ್ಲಿದ್ದರು.