ಶನಿವಾರಸಂತೆ, ಡಿ. 23: ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಎಡೇಹಳ್ಳಿ ಗ್ರಾಮದ ಸುಜಿತ್‍ಕುಮಾರ್ (30) ಎಂಬ ಯುವಕನ ಮೃತದೇಹವು ತೀರ್ಥಹಳ್ಳಿ ರಸ್ತೆಯ ಭಾರತೀಪುರ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.

ಯುವಕನ ಜೇಬಿನಲ್ಲಿದ್ದ ಡ್ರೈವಿಂಗ್ ಲೈಸನ್ಸ್‍ನಿಂದ ಗುರುತು ಪತ್ತೆ ಹಚ್ಚಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂದರ್ಭ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್‍ಪಾಶ ಮೃತರ ನಿವಾಸಕ್ಕೆ ತೆರಳಿದ ಸಂದರ್ಭ ಅವರ ಕುಟುಂಬ ಸದಸ್ಯರ ಅಹವಾಲನ್ನು ಸ್ವೀಕರಿಸಿ ಈ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಯಾವ ಕಾರಣಗಳು ಇಲ್ಲ ಎಂದು ಗೊತ್ತಾಗಿದೆ. ಈ ಯುವಕನನ್ನು ಯಾರೋ ವ್ಯವಸ್ಥಿತ ಪಿತೂರಿ ಮಾಡಿ ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಡಿ.ಪಿ. ಬೋಜಪ್ಪ ಹಾಗೂ ಆದಿಲ್‍ಪಾಶ ಸರ್ಕಾರವನ್ನು ಒತ್ತಾಯಿಸಿದ್ದಾರೆ.