ಸಮನ್ವಯ ಕ್ರೀಡಾಕೂಟ

ಮಡಿಕೇರಿ, ಡಿ. 22: ಟಾಟಾ ಕಾಫಿ ಲಿಮಿಟೆಡ್‍ನ ಅಂಗ ಸಂಸ್ಥೆಯಾದ ಕೂರ್ಗ್ ಫೌಂಡೇಷನ್ ಸಂಸ್ಥೆಯು ಸ್ವಸ್ಥ ಶಾಲೆಯಲ್ಲಿ ಅಮೇರಿಕಾದ ಯುನೆಸ್ ಕೆನಡಿ ಶ್ರೆವರಿ ಅವರ ದಿನಾಚರಣೆಯನ್ನು ಆಚರಿಸಲಾಯಿತು. ದಿನಾಚರಣೆಯ ಪ್ರಯುಕ್ತ ಸಾಮಾನ್ಯ ಮಕ್ಕಳಿಗೂ ಮತ್ತು ವಿಶೇಷ ಮಕ್ಕಳಿಗೂ ಸಮನ್ವಯ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು.

ಟಾಟಾ ಕಾಫಿ ಲಿಮಿಟೆಡ್‍ನ ಅಂಗ ಸಂಸ್ಥೆಯಾದ ಕೂರ್ಗ್ ಫೌಂಡೇಷನ್ ಸಂಸ್ಥೆಯ ಟ್ರಸ್ಟಿ ಮತ್ತು ಸಲಹೆಗಾರರಾದ ಗಂಗಾ ಚಂಗಪ್ಪ ಅವರು ಚೆಂಡನ್ನು ಎಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಓಟದ ಸ್ಪರ್ಧೆ, ಚೆಂಡನ್ನು ಎಸೆಯುವ ಸ್ಪರ್ಧೆ, ಗುಂಡನ್ನು ಎಸೆಯುವ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಮ್ಯೂಸಿಕಲ್ ಚೇರ್ ಹೀಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ನಡೆಸಲಾಯಿತು. ನಂತರದಲ್ಲಿ ಸ್ವಸ್ಥ ಸಭಾಂಗಣದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ನಿಟ್ಟಿನಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಬಾರ್ಡ್ ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ ಮಾತನಾಡಿ, ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಕಾಣಬೇಕು. ಜೊತೆಗೆ ಅವರಲ್ಲಿ ವಿಶಿಷ್ಟ ರೀತಿಯ ಪ್ರತಿಭೆಗಳು ಇರುತ್ತದೆ. ಅದನ್ನು ಪತ್ತೆಹಚ್ಚಿ ಅವರಿಗೆ ಪ್ರೋತ್ಸಾಹ ನೀಡುವಂತೆ ಆಗಬೇಕು. ನಮ್ಮ ನಬಾರ್ಡ್ ಬ್ಯಾಂಕಿನ ವತಿಯಿಂದ ಈಗಾಗಲೇ ಸ್ವಸ್ಥ ಸಂಸ್ಥೆಗೆ ಜೇನು ಕೃಷಿ ತರಬೇತಿಗಾಗಿ ಸಹಕಾರ ನೀಡಿದ್ದೇವೆ. ಹಾಗೆಯೆ ಇನ್ನು ಕೂಡ ಸಂಸ್ಥೆಗೆ ಸಹಕರಿಸಲು ಸಿದ್ಧರಿದ್ದೇವೆಂದು ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು. ಶಕ್ತಿ ದಿನಪತ್ರಿಕೆಯ ವ್ಯವಸ್ಥಾಪಕಿ ಪ್ರಜ್ಞಾರವರು ಮಾತನಾಡಿ, ಮಕ್ಕಳ ಪ್ರತಿಭೆ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭಕೋರುತ್ತಾ ನಾನೊಬ್ಬಳು ಪತ್ರಿಕೋದ್ಯಮ ವಲಯದಲ್ಲಿ ಕೆಲಸ ಮಾಡುತ್ತಿದ್ದು, ನಮ್ಮಿಂದ ಯಾವುದೇ ರೀತಿಯ ಸಹಾಯ ಬಯಸಿದಲ್ಲಿ ಮಾಡಲು ತಯಾರಿದ್ದೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಕವನ್ ಕಾರ್ಯಪ್ಪ ಮಾತನಾಡಿ, ಸ್ವಸ್ಥ ಸಂಸ್ಥೆಯ ಮಕ್ಕಳು ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ಮುಂದಿದ್ದಾರೆ. ಹಾಗೇಯೇ ವಿಶೇಷವಾಗಿ ಹೇಳಬೇಕೆಂದರೆ ಶಾಲೆಯಲ್ಲಿ ವೃತ್ತಿಪರ ತರಬೇತಿಯಲ್ಲಿ ತರಬೇತಿ ಪಡೆದು ಅವರು ಉತ್ಪಾದಿಸುವ ವಸ್ತುಗಳನ್ನು ಜನ ಹೆಚ್ಚು ಖರೀದಿಸುವಂತಾಗಬೇಕು ಎಂದರು.

ಸಲಹೆಗಾರರಾದ ಗಂಗಾ ಚಂಗಪ್ಪರವರು ಮಾತನಾಡಿ, ನಮ್ಮ ಸ್ವಸ್ಥ ಶಾಲೆಯಲ್ಲಿ ಕಳೆದ 8 ವರ್ಷಗಳಿಂದ ಯುನೆಸ್ ಕೆನಡಿ ಶ್ರೆವರಿ ಅವರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಕ್ರೀಡಾಕೂಟಕ್ಕೆ ಸರ್ಕಾರದಿಂದ ಯಾವುದೇ ಸಹಕಾರ ಇರುವುದಿಲ್ಲ. ಹಾಗಾಗಿ ನಮಗೆ ಖಾಸಗಿ ಸಂಘ-ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರುತ್ತಿರುವುದು ತುಂಬಾ ಸಂತೋಷವೆಂದರು.

ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ದಿನಚಾರಣೆಯ ಪ್ರಯುಕ್ತ ಶುಭಕೋರಿದರು. ಸುಂಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸುಂಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸೌಭಾಗ್ಯ, ಕುಶಾಲನಗದರದ ಇನ್ನರ್ ವೀಲ್ ಕ್ಲಬ್‍ನ ಉಪಾಧ್ಯಕ್ಷರು, ಸದಸ್ಯರು ಸ್ವಸ್ಥ ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಸುಮಾ ಸ್ವಾಗತಿಸಿದರು, ಶಿಕ್ಷಕಿ ಲಲಿತಾ ಬಹುಮಾನ ವಿತರಣೆ ಕಾರ್ಯಕ್ರಮ ನೆಡೆಸಿಕೊಟ್ಟರು. ಶಿಕ್ಷಕಿ ಶೀತಲ್ ನಿರೂಪಣೆ ಮಾಡಿದರು. ಶಿಕ್ಷಕಿ ಶ್ವೇತಾ ವಂದಿಸಿದರು.