ಗುಡ್ಡೆಹೊಸೂರು, ಡಿ. 23: ಸದಾ ಪಠ್ಯಪುಸ್ತಕ ಹಿಡಿದು ತಿಂಗಳುಗಳ ಮುನ್ನವೇ ಪರೀಕ್ಷೆಗೆ ತಯಾರಿ ಆಗುವ ಇಂದಿನ ಕಾಲದ ಮಕ್ಕಳು ಇಂದು ಮಣ್ಣಿನ ಕಲಾಕೃತಿಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಕುಶಾಲನಗರ ಸಮೀಪದ ಗುಡ್ಡೆಹೊಸೂರಿನ ಕೂರ್ಗ್ ಕ್ಲೇ ಮಾರ್ಟ್ ಕರಕುಶಲ ಮಳಿಗೆ ವತಿಯಿಂದ ಪಾಟರಿ ಫೆಸ್ಟಿವಲ್ ಅಂಗವಾಗಿ ಆಯೋಜಿಸಿದ್ದ ಉಚಿತ ಪಾಟರಿ ತಯಾರಿ ಮೇಳದಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಮಣ್ಣಿನ ವಿವಿಧ ಕಲಾಕೃತಿಗಳನ್ನು ತಯಾರಿಸಿದರು.

ಡೈನೋಸಾರ್, ಆನೆ, ಆಮೆ, ದೀಪ, ಬೆಕ್ಕು, ಹಂಸ, ಕಾರು ಹೀಗೆ ಹಲವಾರು ಕಲಾಕೃತಿಗಳು ಹೊಸ ಕಲಾವಿದರ ಕುಂಚದಿಂದ ರೂಪುಗೊಂಡವು. ಕೇರಳದ ‘ಜಟಾಯು ಅರ್ತ್ ಸೆಂಟರ್’ನ ಜಟಾಯು ಪ್ರತಿಮೆಯ ಮಾದರಿಯು ಕೂಡ ಮಣ್ಣಿನ ಕಲಾಕೃತಿಗಳಲ್ಲಿ ಸುಂದರವಾಗಿ ಮೂಡಿಬಂದಿತು.

ಕೇರಳದ ಲಲಿತ ಕಲಾ ಸಂಘದ ಕಲಾವಿದ ವಿ.ಕೆ. ಜಯನ್ ಪಾಟರಿ ತಯಾರಿಕೆಯ ತರಬೇತಿಯನ್ನು ನೀಡಿದರು. ಇನ್ನೂ ಹಲವು ದಿನಗಳ ಕಾಲ ಉಚಿತ ತರಬೇತಿ ನಡೆಯಲಿದೆಯೆಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಗುಡ್ಡೆ ಹೊಸೂರು ಗ್ರಾ.ಪಂ. ಅಧ್ಯಕ್ಷೆ ಭಾರತಿ, ಪಿ.ಡಿ.ಒ. ಶ್ಯಾಂ, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್, ಉಧ್ಗಮ್ ಶಾಲೆಯ ವ್ಯವಸ್ಥಾಪಕಿ ಪ್ರೇಮಾ ಅಚ್ಚಯ್ಯ ಹಾಗೂ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕೆ.ಡಿ. ದಾದಪ್ಪ, ಕ್ಲೇಮಾರ್ಟ್ ಸಂಸ್ಥೆಯ ಅಧ್ಯಕ್ಷ ಶಾಫಿ, ಸಂಶೀರ್ ಹಾಜರಿದ್ದರು.