ಮಡಿಕೇರಿ, ಡಿ. 22: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಬೆಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮಕ್ಕಳಿಂದ ಮಕ್ಕಳಿಗಾಗಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವು ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಟಿ.ಎಸ್. ಅರುಂಧತಿ ಮಾತನಾಡಿ, ಪ್ರತಿಯೊಂದು ಮಗು ಕೂಡ ಉತ್ತಮ ಬಾಲ್ಯವನ್ನು ಹೊಂದುವ ಹಕ್ಕಿದೆ.
ಆದರೆ ಎಲ್ಲಾ ಮಕ್ಕಳಿಗೆ ಒಳ್ಳೆಯ ಬಾಲ್ಯ ಸಿಗುವುದಿಲ್ಲ. ಬಾಲ ಮಂದಿರಗಳಲ್ಲಿನ ಮಕ್ಕಳನ್ನು ಸಂತೋಷದಿಂದ, ಸ್ವಚ್ಛಂದವಾಗಿ ನೋಡಿಕೊಳ್ಳಲಾಗುತ್ತಿದೆ ಎಂದರು.
ಬಾಲಮಂದಿರದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಮಾಹಿತಿ ನೀಡಲಾಗುತ್ತದೆ. ಇತರರಂತೆ ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವಂತಾಗಬೇಕು. ಸರ್ಕಾರಿ ಶಾಲೆ ಮತ್ತು ಬಾಲಮಂದಿರ ಮಕ್ಕಳು ಸರ್ಕಾರದ ವತಿಯಿಂದ ಆಯೋಜಿಸುವ ವಿವಿಧ ಕಾರ್ಯಕ್ರಮದಲ್ಲಿ ಆತ್ಮಸ್ಥೈರ್ಯದಿಂದ ಭಾಗವಹಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಇಲಾಖೆ ವತಿಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇಲ್ಲಿಯ ಮಕ್ಕಳಲ್ಲಿ ಕಲೆ ಮತ್ತು ಸಾಂಸ್ಕøತಿಕ ಪ್ರತಿಭೆಗಳಿವೆ. ಅದರಂತೆ ವಿದ್ಯಾಭ್ಯಾಸದಲ್ಲಿ ಕೂಡ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಡಿ. ರವೀಂದ್ರ ಮಾತನಾಡಿ, ಬಾಲ ನ್ಯಾಯ ಕಾಯ್ದೆ ಜಾರಿ ಬಂದ ನಂತರ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಹಲವಾರು ಬಿಗಿಯಾದ ಕಾನೂನುಗಳು ಮತ್ತು ನಿಯಮಗಳು ಬಂದವು. ಮಕ್ಕಳಿಗೆ ಇಲ್ಲಿ ಸಂಪೂರ್ಣ ಸುರಕ್ಷತೆ ಇದೆ. ಒಳ್ಳೆಯ ಸೌಕರ್ಯ, ಸಂಗೀತ, ಕ್ರೀಡೆ, ಯೋಗ ಮತ್ತು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸುತ್ತಾರೆ. ದಾನಿಗಳು ಈ ಸಂಸ್ಥೆಗೆ ಮತ್ತು ಮಕ್ಕಳ ಏಳಿಗೆಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತ ರೈ ಮಾತನಾಡಿ, ಅಪ್ಪ-ಅಮ್ಮನ ಆಸರೆಯಂತೆ ಬಾಲಕರ ಬಾಲಮಂದಿರದಲ್ಲಿ ಧೈರ್ಯವಾಗಿ ಬೆಳೆಯುತ್ತಾರೆ.
ಬಾಲಮಂದಿರದ ಮಕ್ಕಳನ್ನು ಇಲ್ಲಿನ ಸಿಬ್ಬಂದಿಗಳು ಪ್ರೀತಿ, ವಿಶ್ವಾಸ, ಧೈರ್ಯ, ಸಹನೆ, ಸಹಾನುಭೂತಿ ಎಲ್ಲವನ್ನು ಈ ಸಂಸ್ಥೆಯು ಮಕ್ಕಳಿಗೆ ನೀಡುತ್ತದೆ ಎಂದರು. ಮಕ್ಕಳಲ್ಲಿರುವ ಕಲೆಯನ್ನು ಅನಾವರಣಗೊಳಿಸಲು ಇದು ಒಳ್ಳೆಯ ವೇದಿಕೆ. ಇದರ ಸದುಪಯೊಗ ಪಡೆದುಕೊಳ್ಳಿ. ಮುಂದೊಂದು ದಿನ ಇಲ್ಲಿನ ಮಕ್ಕಳು ಭವಿಷ್ಯದ ದೊಡ್ಡ ಬೆಳಕಾಗುತ್ತಾರೆ ಎಂದು ಹೇಳಿದರು.
ಮಕ್ಕಳ ಸಹಾಯವಾಣಿಯ ನಿರ್ದೇಶಕ ಡೇವಿಡ್ ರಾಯ್ ಮಾತನಾಡಿ, ಮಕ್ಕಳು ಸ್ವತಂತ್ರವಾಗಿ ಬದುಕಲು ಪೋಷಕರು ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಅಬ್ದುಲ್ ಲತೀಫ್, ನವೀತ ರಾವ್, ಬಾಲಕರ ಬಾಲ ಮಂದಿರದ ಅಧೀಕ್ಷಕ ಚರಣ್, ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ವನಿತ. ಬಾಲಕಿಯರ ಬಾಲಮಂದಿರದ ಮಕ್ಕಳು ಪ್ರಾರ್ಥಿಸಿದರು, ಹೆಚ್. ಸೂರಜ್ ನಿರೂಪಿಸಿದರು.