ಮಡಿಕೇರಿ, ಡಿ. 23: ಇತ್ತೀಚೆಗೆ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಒಕ್ಕೂಟದ ಸಮ್ಮಿಲನ ಕಾರ್ಯಕ್ರಮ ನಡೆಯಿತು. 2009 ರಲ್ಲಿ 12 ನೇ ತರಗತಿಯನ್ನು ಪೂರೈಸಿ ಈಗ ವಿಭಿನ್ನ ಉನ್ನತ ಹುದ್ದೆಗಳನ್ನಲಂಕರಿಸಿದ ಹಳೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಡಿ.ವೈ.ಎಸ್ಪಿ. ದಿನೇಶ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು “ನವೋದಯ ವಿದ್ಯಾಲಯಗಳು ಆಧುನಿಕ ಗುರುಕುಲಗಳು. ಅವುಗಳಲ್ಲಿ ಓದುತ್ತಿರುವ ನೀವು ಅದೃಷ್ಟವಂತರು, ಇಲ್ಲಿನ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಉತ್ತಮ ನಾಗರೀಕರಾಗಬೇಕು” ಎಂದು ಹೇಳಿದರು. ಹಳೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪೊನ್ನಣ್ಣ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅಂದು ಬೆಳಗಿನಿಂದಲೇ ವಿದ್ಯಾಲಯದ ಮಕ್ಕಳಿಗೆ ಹಳೆಯ ವಿದ್ಯಾರ್ಥಿ ಡಾ. ಬೋಪಣ್ಣ ಅವರ ನೇತೃತ್ವದಲ್ಲಿ ಆರು ವೈದ್ಯರ ತಂಡದಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಮಕ್ಕಳು ಈ ಚಿಕಿತ್ಸೆಯ ಲಾಭ ಪಡೆದುಕೊಂಡರು.
2009 ರಲ್ಲಿ ಪಾಸಾಗಿ ಹೋದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲೆಗೆ ರೂ.70,000/- ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಲ್ಲದೇ ಶಾಲೆಯಲ್ಲಿ ಆರರಿಂದ ಹನ್ನೆರಡನೆಯ ತರಗತಿಗಳಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಧನರೂಪದ ಬಹುಮಾನಗಳನ್ನೂ ಕೊಟ್ಟು ಪ್ರೋತ್ಸಾಹಿಸಿದರು.
ಪ್ರಾಂಶುಪಾಲ ಪಿ.ಎಮ್. ಐಸಾಕ್ ಅವರು ವಿದ್ಯಾರ್ಥಿಗಳ ಸಹಾಯ ಮತ್ತು ಪ್ರೋತ್ಸಾಹಗಳನ್ನು ಮನದುಂಬಿ ಪ್ರಶಂಸಿಸಿದರು. ಹಳೆಯ ವಿದ್ಯಾರ್ಥಿಗಳ ಅನುಭವಗಳನ್ನು ಶಾಲೆಯ ಮಕ್ಕಳು ತುಂಬಾ ಆಸಕ್ತಿಯಿಂದ ಕೇಳಿದರು. ಸಮಾರಂಭದಲ್ಲಿ ಉಪ ಪ್ರಾಂಶುಪಾಲ ದಿನೇಶನ್ ಮತ್ತು ವಿದ್ಯಾಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿನಿ ಧನಲಕ್ಷ್ಮಿ ಪ್ರಾರ್ಥನೆ ಮಾಡಿದರು. ಪ್ರಾರ್ಥನಾ ಕಾಳಪ್ಪ ಸ್ವಾಗತಿಸಿದರು. ಪ್ರೊ. ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿದರು.