ಮಡಿಕೇರಿ ಡಿ.23 : ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಗತಿಪರ ಜನಾಂದೋಲನ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಜನಾಂದೋಲನ ಸಭೆಯನ್ನು ಆಯೋಜಿಸಲಾಗುವುದೆಂದು ಸಮಿತಿಯ ಪ್ರಮುಖರಾದ ವಿ.ಪಿ.ಶಶಿಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವಿರೋಧಿಯಾದ ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಸೇರಿದಂತೆ ಕೇಂದ್ರದ ಬೇಜವಾಬ್ದಾರಿ ನೀತಿಗಳಿಂದ ಉಂಟಾಗಿರುವ ಅಸ್ಥಿರತೆ ವಿರುದ್ಧ ಬಿಜೆಪಿಯೇತರ ಪಕ್ಷಗಳು ಸಂಘಟಿತವಾಗಿ ಜನಜಾಗೃತಿ ಮೂಡಿಸಲು ಪ್ರಗತಿಪರ ಜನಾಂದೋಲನ ಸಮಿತಿಯನ್ನು ರಚಿಸಿರುವುದಾಗಿ ತಿಳಿಸಿದರು.
ಕೇಂದ್ರದ ವಿರುದ್ಧ ಜಿಲ್ಲಾ ಕೇಂದ್ರ ಮಾತ್ರವಲ್ಲದೆ ನೂತನ ಎರಡು ತಾಲ್ಲೂಕು ಸೇರಿದಂತೆ ಜಿಲ್ಲೆಯ 5 ತಾಲೂಕುಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಆ ಮೂಲಕ ರಾಜಕಾರಣವನ್ನು ಮೀರಿ, ಪರಸ್ಪರ ಸೌಹಾರ್ದತೆ ಮತ್ತು ಸಹಬಾಳ್ವೆÉಯ ದೇಶವನ್ನು ಕಟ್ಟುವ ಪ್ರಯತ್ನ ಮಾಡಲಾಗುವುದೆಂದು ವಿ.ಪಿ.ಶಶಿಧರ್ ತಿಳಿಸಿದರು.
ಅನಗತ್ಯ ವ್ಯಾಯಾಮ : ಸಮಿತಿಯ ಸದಸ್ಯರು ಹಾಗೂ ಸಿಪಿಐಎಂ ಪಕ್ಷದ ಪ್ರಮುಖರಾದ ಡಾ. ಇ.ರ.ದುರ್ಗಾಪ್ರಸಾದ್ ಮಾತನಾಡಿ, ಜಾತಿ ಧರ್ಮಗಳ ಆಧಾರದಲ್ಲಿ ಕಾಯ್ದೆ ಕಾನೂನುಗಳನ್ನು ರೂಪಿಸುವುದು ಜನವಿರೋಧಿ ನೀತಿ ಎಂದು ಅಭಿಪ್ರಾಯಪಟ್ಟರು. ಈಶಾನ್ಯ ಭಾಗಗಳಲ್ಲಿ ಕೈಗೊಂಡ ಪೌರತ್ವ ನೋಂದಣಿ ಸಾಕಷ್ಟು ಗೊಂದಲ ಮತ್ತು ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಮತ್ತೆ ಅದೇ ಪೌರತ್ವ ನೋಂದಣಿಯನ್ನು ದೇಶವ್ಯಾಪಿ ನಡೆಸಲು ಮುಂದಾಗಿರುವ ಕೇಂದ್ರದ ಬಿಜೆಪಿ ಪ್ರಯತ್ನವು ಅನಗತ್ಯ ‘ವ್ಯಾಯಾಮ’ ವೆಂದು ವ್ಯಂಗ್ಯವಾಡಿದರು.