ವೀರಾಜಪೇಟೆ, ಡಿ. 21: ಜನಾಂಗದ ಒಗ್ಗೂಡುವಿಕೆಗೆ ಮತ್ತು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಹಬ್ಬಗಳ ಸಾಮೂಹಿಕ ಆಚರಣೆ ಸಹಾಯಕವಾಗಲಿದೆ ಎಂದು ಮಾಜಿ ಸಚಿವ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಎಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆಯ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ “ಸದ್ಭಾವನಾ ಮಂಚ್” ಆಶ್ರಯದಲ್ಲಿ ನಡೆದ ಹುತ್ತರಿ ಹಬ್ಬದ ಪ್ರಯುಕ್ತ “ಸ್ನೇಹ ಮಿಲನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಾಣಯ್ಯ ಅವರು, ಪರಸ್ಪರ ಐಕ್ಯತೆ, ಸಾಮರಸ್ಯ ಮತ್ತು ಸೌಹಾರ್ದತೆ ಹಬ್ಬಗಳ ಆಚರಣೆಗಳಿಗೆ ಹೆಚ್ಚು ಅರ್ಥ ನೀಡುತ್ತದೆ. ಜನಾಂಗಗಳು ತಮ್ಮ ಸಂಸ್ಕøತಿ, ಭಾಷೆ ಮತ್ತು ನೆಲವನ್ನು ಉಳಿಸಿಕೊಳ್ಳಲು ಪಾರಂಪರ್ಯ ರೀತಿಯ ಆಚರಣೆಗಳು ನಡೆಯಬೇಕು. ಆಚರಣೆಗಳು ಕೇವಲ ಒಂದೇ ಜನಾಂಗದಲ್ಲಿ ಸೀಮಿತವಾಗಬಾರದು. ಹುತ್ತರಿ ಎಂಬುದು ಕೊಡವರ ಆಚರಣೆಯಾದರೂ ಸುಗ್ಗಿಯ ಹಬ್ಬ ಎಂಬ ನೆಲೆಯಲ್ಲಿ ಇಡೀ ಸಮಾಜ ಸಂತೋಷವನ್ನು ವಿನಿಮಯ ಮಾಡಿಕೊಳ್ಳುತ್ತದೆ. ವೈವಿಧ್ಯತೆಯಲ್ಲಿ ಏಕತೆಯೇ ಹಬ್ಬಗಳ ತಿರುಳು. ಧರ್ಮಗಳು ಮನುಷ್ಯನಿಗೆ ಸಮಸ್ಯೆಯಾಗಬಾರದು. ರಾಜಕಾರಣವು ಪರಿಶುದ್ಧವಾಗ ಬೇಕಾದರೆ ರಾಜಕಾರಣದಲ್ಲಿ ಧರ್ಮ ಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಪ್ರವೇಶಿಸಿದಲ್ಲಿ ಅದು ಅಪಾಯಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹುತ್ತರಿ ಹಬ್ಬದ ಸಂದೇಶ ನೀಡಿದ ಗೋಣಿಕೊಪ್ಪ ಕಾವೇರಿ ಕಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ|| ಎಂ.ಬಿ. ಕಾವೇರಪ್ಪ ಜಾಗತೀಕರಣದ ಇಂದಿನ ದಿನಗಳಲ್ಲಿ ಹಬ್ಬಗಳ ಆಚರಣೆ ಯಾಂತ್ರೀಕರಣ ಗೊಳ್ಳುತ್ತಿದೆ. ನಮ್ಮ ಬೇಸಾಯದ ಕೆಲಸಗಳು ಹಲವು ಕಾರಣಗಳಿಂದ ಯಾಂತ್ರೀಕರಣಗೊಂಡಂತೆ ನಮ್ಮ ಆಚರಣೆಗಳು ಯಾಂತ್ರೀಕರಣ ಗೊಳ್ಳಬಾರದು ಎಂದರು.
ಕಾರ್ಯಕ್ರಮದಲ್ಲಿ ಸೌಹಾರ್ದ ಸಂದೇಶ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ಹಬ್ಬಗಳ ಆಚರಣೆಗಳು ಪ್ರಕೃತಿ ಮತ್ತು ದೇವರ ಬಗೆಗಿನ ಜ್ಞಾನಕ್ಕೆ ಪೂರಕವಾಗಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸದ್ಭಾವನಾ ಮಂಚ್ ಸ್ಥಾನೀಯ ಅಧ್ಯಕ್ಷ ಡಾ||ಎಂ.ಸಿ.ಕಾರ್ಯಪ್ಪ; ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮತಮ್ಮ ಕರ್ತವ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದರು.
ಸದ್ಭಾವನಾ ಮಂಚ್ ಸ್ಥಾನೀಯ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ; ಸ್ವಾಗತಿಸಿದರು. ಕೆ.ಟಿ.ಬೇಬಿ ಮ್ಯಾಥ್ಯು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಹಿರಿಯರಾದ ನಾಯಡ ವಾಸು ನಂಜಪ್ಪ, ಮಂಚ್ನ ಕಾರ್ಯಾಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ವೇದಿಕೆಯಲ್ಲಿದ್ದರು.
ವಿದ್ಯಾರ್ಥಿನಿಯರಾದ ಭೋಜಮ್ಮ ಮತ್ತು ಮಾಚಮ್ಮ ಪ್ರಾರ್ಥಿಸಿದರೆ, ನಿಕ್ಷೇಪ್ ಜೈನ್ ನಿರೂಪಿಸಿದರು. ಸ್ನೇಹಮಿಲನದ ಅಂಗವಾಗಿ ಸ್ಥಳೀಯ ಕಾವೇರಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕೊಡವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.